ಬೆಂಗಳೂರು:ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಬೆಳ್ಳಿ ತೆರೆಯಲ್ಲಿ ನಟಿಸುವ ನಾಯಕರು ನಿಜ ಜೀವನದಲ್ಲಿ ವಿಲನ್ ಆಗಿರುವುದು ಹೊಸ ಸಂಗತಿಯೇನಲ್ಲ. ಈ ಸಾಲಿಗೆ ಮತ್ತೊಂದು ಹೆಸರಿನ ಸೇರ್ಪಡೆಯೇ ಸಿದ್ದಾಂತ್ ಕಪೂರ್.
ಹಲವು ದಶಕಗಳಿಂದ ತಮ್ಮದೇ ಆದ ಮ್ಯಾನರಿಸಂ ಮೂಲಕ ಹಿಂದಿ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಪೋಷಕ ನಟ ಶಕ್ತಿ ಕಪೂರ್. ಇವರ ಪುತ್ರಿ ಶ್ರದ್ಧಾ ಕಪೂರ್ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಈ ಕುಟುಂಬ ಆರ್ಥಿಕವಾಗಿ ಸಬಲರಾಗಿದ್ದರೂ, 'ದಿ ಪಾರ್ಕ್ ಹೋಟೆಲ್ನಲ್ಲಿರುವ ಐ ಬಾರ್ನಲ್ಲಿ ಡಿಜೆಯಾಗಿ ಪಾರ್ಟಿಯಲ್ಲಿ ಸಿದ್ದಾಂತ್ ಡ್ರಗ್ಸ್ ಸೇವನೆ ಮಾಡಿದ್ದು ಯಾಕೆ ?, ಡ್ರಗ್ಸ್ ಪೆಡ್ಲಿಂಗ್ನಲ್ಲಿ ಸಿದ್ದಾಂತ್ ತೊಡಗಿಸಿಕೊಂಡಿದ್ದರಾ?, ಡ್ರಗ್ಸ್ ಕಮಟು ವಾಸನೆಯಿಂದೆ ಬಾಲಿವುಡ್ ನಂಟಿದೆಯಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಗಾಡ್ ಫಾದರ್ ಇದ್ದರೂ ಡಿಜೆಯಾಗಿದ್ದು ಯಾಕೆ?:ತಂದೆಯ ಜನಪ್ರಿಯತೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಸಿದ್ದಾಂತ್ ಹೆಸರಾಂತ ಹಿಂದಿ ಚಿತ್ರಗಳಲ್ಲಿ ಸಹ ನಟನಾಗಿ ಗುರುತಿಸಿಕೊಂಡಿದ್ದರು. ಮೊದಲಿಗೆ ಸಹಾಯಕ ನಿರ್ದೇಶಕನಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸಿದ್ದಾಂತ್ ಭಾಗಮ್ ಭಾಗ್, ಚುಪ್ ಚುಪ್ ಕೆ, ಭೂಲ್ ಭುಲೈಯ್ಯ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದರು.
2013ರಲ್ಲಿ ತೆರೆಕಂಡ ಶೂಟ್‌ಔಟ್ ಅಡ್ ವಡಾಲ, ಅಗ್ಲಿ ಜಝ್ಬಾ, ಹಸೀನಾ ಪಾರ್ಕರ್, ಯಾರಾಮ್ ಹಲೋ ಚಾರ್ಲಿ ಹಾಗೂ ಚೆಹ್ರೆ ಮುಂತಾದ ಸಿನಿಮಾಗಳಲ್ಲಿ ಸಿದ್ಧಾಂತ್ ಕಪೂರ್ ನಟಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ನಟನೆ ಅವಕಾಶ ಕಡಿಮೆಯಾಗಿತ್ತು. ಬೇಡಿಕೆ ಕುಸಿದಿತ್ತು. ಮಾಡಿದ ಸಿನಿಮಾಗಳು ಪ್ಲಾಪ್ ಲಿಸ್ಟ್ಗೆ ಸೇರಿಕೊಂಡಿದ್ದವು. ಇವೆಲ್ಲ ಬೆಳವಣಿಗೆ ಆತನ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಿತ್ತು.