ಬೆಂಗಳೂರು: ಜನರ ಈ ಪ್ರೀತಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ದುಃಖದಲ್ಲಿರುವ ನಮಗೆ ಜನರು ಜೊತೆಯಾಗಿ ಇರುತ್ತೇವೆ ಎಂದು ಹೇಳುವುದನ್ನು ನೋಡಿದರೆ, ನಾವು ನಿಜಕ್ಕೂ ಪುಣ್ಯವಂತರು ಎಂದು ನಟ ಶಿವರಾಜ್ ಕುಮಾರ್ ಭಾವುಕರಾದರು.
ಪಾವಗಡದಿಂದ ಎತ್ತಿನಗಾಡಿ ಮೂಲಕ ಬಂದಿದ್ದ ಅಭಿಮಾನಿಗಳ ಪ್ರೀತಿ ಕಂಡು ಮಾತನಾಡಿದ ಶಿವಣ್ಣ, ಪುನೀತ್ನನ್ನು ಇಷ್ಟು ಬೇಗ ನಮ್ಮಿಂದ ಆ ದೇವರು ಕಿತ್ತುಕೊಂಡುಬಿಟ್ಟ. ಅಭಿಮಾನಿಗಳ ಜತೆಗೆ ನಾವೆಂದಿಗೂ ಇರುತ್ತೇವೆ. ತೆಲುಗು, ತಮಿಳು ಎಲ್ಲ ಸಿನಿಮಾದ ನಟರು ಆಗಮಿಸಿದರು. ಇಂಡಸ್ಟ್ರಿ ಅಂದರೆ ನಾವೆಲ್ಲ ಒಂದೇ ಎಂದು ಸಾಬೀತು ಮಾಡಿದರು ಎಂದರು.
ಪುನೀತ್ ರಾಜಕುಮಾರ್ ಸಮಾಧಿ ನೋಡಲು ಅಭಿಮಾನಿಗಳು ರಾಜ್ಯದ ಮೂಲೆಮೂಲೆಯಿಂದ ಬರುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ತೆರಳಿ, ಅಲ್ಲಿಂದ ಸದಾಶಿವನಗರ ಮನೆಗೆ ಬಂದು ದುಃಖದಿಂದ ಕೂಡಿರುವ ಕುಟುಂಬಕ್ಕೆ ನಾವಿದ್ದೇವೆ ಎಂದು ಧೈರ್ಯ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಇಂದು ಎತ್ತಿನಗಾಡಿಯಲ್ಲಿ ಬಂದ ಅಭಿಮಾನಿ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆದು, ಬಳಿಕ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದಾರೆ. ಪಾವಗಡದ ತಾಳೆಮರದಳ್ಳಿಯಿಂದ ಅಭಿಮಾನಿಗಳಾದ ಶಿವ, ದಯಾನಂದ್, ಮಂಜು, ಜಾನಿ ಹಾಗು ರೆಡ್ಡಿ ಆಗಮಿಸಿದ್ದಾರೆ.