ಬೆಂಗಳೂರು :ಹೃದಯಾಘಾತದಿಂದ ನಿನ್ನೆ ನಿಧನರಾದ ನಟ ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರವನ್ನು ನಾಳೆಗೆ ಮುಂದೂಡಿಕೆಯಾಗಿರುವುದು ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿದೆ.
ನಗರದ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಸಮಾಧಿ ಪಕ್ಕದಲ್ಲೇ ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರಕ್ಕೆ ಸ್ಥಳ ನಿಗದಿ ಮಾಡಲಾಗಿದೆ. ಇಂದು ಸಂಜೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಪುಟದ ಪ್ರಮುಖರು ತಿಳಿಸಿದ್ದರು.
ಅಪಾರ ಸಂಖ್ಯೆಯ ಅಭಿಮಾನಿಗಳು ಕಠೀರವ ಸ್ಟುಡಿಯೋ ಸಮೀಪ ಜಮಾಯಿಸಿದ್ದರು. ಆದರೆ, ಕಡೆಯ ಕ್ಷಣಗಳಲ್ಲಿ ಅನಿವಾರ್ಯ ಕಾರಣ ನೀಡಿ ಅಂತ್ಯಸಂಸ್ಕಾರವನ್ನು ನಾಳೆಗೆ ಮುಂದೂಡಿರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಇಂದೇ ನೆರವೇರಲಿದೆ ಎಂದುಕೊಂಡಿದ್ದ ಅಂತ್ಯಸಂಸ್ಕಾರ ನಾಳೆಗೆ ಮುಂದೂಡಿಕೆ ಆಗಿರುವುದು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳಲ್ಲಿ ನಿರಾಶೆ ಉಂಟು ಮಾಡಿದೆ.
ಪೊಲೀಸರ ವಿರುದ್ಧ ಅಭಿಮಾನಿಗಳ ಅಸಮಾಧಾನ : ಅಂತ್ಯಸಂಸ್ಕಾರ ಸಮಯ ನಾಳೆಗೆ ನಿಗದಿಯಾಗಿರುವ ಹಿನ್ನೆಲೆ ಸಮಾಧಿ ಸ್ಥಳ ಸಮೀಪ ಸೇರಿದ್ದ ಅಭಿಮಾನಿಗಳನ್ನು ಪೊಲೀಸರು ತೆರಳುವಂತೆ ಸೂಚಿಸುತ್ತಿದ್ದು, ಇದನ್ನು ಕೆಲವರು ವಿರೋಧಿಸುತ್ತಿದ್ದಾರೆ.
ಅಂತ್ಯಸಂಸ್ಕಾರ ಇಂದೇ ನೆರವೇರಿಸಲಾಗುತ್ತದೆ. ನಮ್ಮನ್ನು ಇಲ್ಲಿಂದ ಕಳುಹಿಸಲು ಈ ಪ್ರಯತ್ನ ನಡೆಯುತ್ತಿದೆ ಎಂಬ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, 3 ಗಂಟೆ ನಂತರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಗುತ್ತದೆ ಎಂದು ಹೇಳಲಾಗಿತ್ತು.
ಮೆರವಣಿಗೆ ಆರಂಭವಾಗುವುದಕ್ಕೆ 1ಗಂಟೆ ಮುನ್ನ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಸಾಕಷ್ಟು ಮಂದಿ ನಾಳೆಯವರೆಗೆ ಇಲ್ಲಿಯೇ ಇದ್ದು ಕಾಯುತ್ತೇವೆ ಎಂದು ಹೇಳುತ್ತಿದ್ದಾರೆ.
ಈಗಾಗಲೇ ನಿಯೋಜಿಸಿದ್ದ ಹೆಚ್ಚುವರಿ ಪೊಲೀಸರು ಸ್ಥಳದಲ್ಲಿ ಇದ್ದಾರೆ. ಕಾವಲಿಗೆ ನಿಂತಿದ್ದ ಅರೆಸೇನಾ ಪಡೆ ಸಿಬ್ಬಂದಿ ಕೆಲವರು ತಮ್ಮ ವಾಹನಗಳಿಗೆ ತೆರಳಿದ್ದಾರೆ. ಅಂತ್ಯಸಂಸ್ಕಾರ ನಾಳೆ ನಡೆಯುವ ಎಲ್ಲ ಸೂಚನೆ ಕಂಠೀರವ ಸ್ಟುಡಿಯೋದಲ್ಲಿ ಗೋಚರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಬಲವಂತವಾಗಿ ಸಾರ್ವಜನಿಕರನ್ನು ಕಳುಹಿಸುವ ಪ್ರಯತ್ನವನ್ನು ಪೊಲೀಸರು ಮುಂದುವರಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿರುವ ಸಾರ್ವಜನಿಕರು ತೆರಳುವ ಸಾಧ್ಯತೆ ಗೋಚರಿಸುತ್ತಿಲ್ಲ. ಪೊಲೀಸರು ತಮ್ಮ ಪ್ರಯತ್ನ ಮುಂದುವರಿಸಿದ್ದು, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ನಟ ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರ ನಾಳೆ ಮಧ್ಯಾಹ್ನದ ನಂತರ ನೆರವೇರುವ ಸಾಧ್ಯತೆ ಇದೆ. ಈಗಲೂ ಕಂಠೀರವ ಸ್ಟೇಡಿಯಂನಲ್ಲಿಯೇ ಪುನೀತ್ ರಾಜಕುಮಾರ್ ಪಾರ್ಥಿವ ಶರೀರ ಇರಿಸಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಅಂತ್ಯಸಂಸ್ಕಾರವನ್ನು ನಾಳೆಗೆ ಮುಂದೂಡಲಾಗಿರಬಹುದು ಎಂಬ ಮಾತು ಕೇಳಿ ಬರುತ್ತಿವೆ.