ಬೆಂಗಳೂರು:ಸ್ಯಾಂಡಲ್ವುಡ್ನ ಯುವರತ್ನ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಗಲಿದ ನಟನ ಅಂತ್ಯಕ್ರಿಯೆ ನಡೆಯಲಿದ್ದು, ಈ ವೇಳೆ ಕುಟುಂಬದ ಸದಸ್ಯರು, ಆಪ್ತರು ಹಾಗೂ ಕೆಲ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬೆಳಗ್ಗೆ 5:30ರಿಂದ 6:30ರವರೆಗೆ ಪಾರ್ಥಿವ ಶರೀರದ ಮೆರವಣಿಗೆ ಆರಂಭಗೊಳ್ಳಲಿದ್ದು, ಕಂಠೀರವ ಸ್ಟುಡಿಯೋಕ್ಕೆ ಬರುತ್ತಿದ್ದಂತೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಸಾರ್ವಜನಿಕರಿಗಿಲ್ಲ ಅವಕಾಶ
ಕಂಠೀರವ ಸ್ಟುಡಿಯೋದಲ್ಲಿ ಸ್ಥಳವಕಾಶ ಕಡಿಮೆ ಇರುವ ಕಾರಣ ಸಾರ್ವಜನಿಕರಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಕೇವಲ ಕುಟುಂಬದ ಸದಸ್ಯರು, ಆಪ್ತವಲಯ ಹಾಗೂ ಕೆಲ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನೆಚ್ಚಿನ ನಟನ ಅಂತ್ಯಕ್ರಿಯೆ ವೀಕ್ಷಣೆ ಮಾಡಲು ಸ್ಟುಡಿಯೋದ ಹೊರಭಾಗದಲ್ಲಿ 12 ಕಡೆ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ.
ಇದನ್ನೂ ಓದಿರಿ:'ಅಪ್ಪು' ನಿಧನ: ಬೆಳಗ್ಗೆ 10 ಗಂಟೆಗೆ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ
ಮೂರನೇ ದಿನದ ಕಾರ್ಯ
ಪುನೀತ್ ರಾಜ್ಕುಮಾರ್ ನಿಧನರಾಗಿ ಇಂದಿಗೆ ಮೂರನೇ ದಿನ. ಹೀಗಾಗಿ ಅಂತ್ಯಕ್ರಿಯೆ ಮುಗಿದ ತಕ್ಷಣವೇ ಕುಟುಂಬಸ್ಥರು ಮನೆಗೆ ಹೋಗಿ, ಮರಳಿ ಆ ಸ್ಥಳಕ್ಕೆ ಬಂದು ಹಾಲು-ತುಪ್ಪ ಬಿಡಬೇಕಿದೆ. ಹೀಗಾಗಿ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸುರಕ್ಷತೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ.