ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ನಿಧನಕ್ಕೆ ನಟ ಪುನೀತ್ ರಾಜ್ಕುಮಾರ್ ಶೋಕ ವ್ಯಕ್ತಪಡಿಸಿದ್ದಾರೆ. ತಾವು ಸಿದ್ದಾರ್ಥ್ ಜೊತೆಗಿರುವ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ನಲ್ಲಿ ಷೇರ್ ಮಾಡಿಕೊಂಡಿರುವ ಪುನೀತ್ ಸಿದ್ದಾರ್ಥ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಸಿದ್ದಾರ್ಥ್ ನಿಧನಕ್ಕೆ ಕಂಬನಿ ಮಿಡಿದ ಪವರ್ ಸ್ಟಾರ್
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಜೊತೆಗಿನ ಫೋಟೋವೊಂದನ್ನು ನಟ ಪುನೀತ್ ರಾಜ್ಕುಮಾರ್ ತಮ್ಮ ಟ್ವಿಟ್ಟರ್ನಲ್ಲಿ ಷೇರ್ ಮಾಡಿಕೊಳ್ಳುವ ಮೂಲಕ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
'ಸಿದ್ದಾರ್ಥ್ ಅವರ ಹಠಾತ್ ನಿಧನದ ಸುದ್ದಿ ತಿಳಿದು ಬಹಳ ದು:ಖವಾಗಿದೆ. ಕಾಫಿ ಮೂಲಕ ಎಷ್ಟೋ ಜನರಿಗೆ ಉದ್ಯೋಗ ನೀಡಬಹುದು ಎಂದು ತೋರಿಸಿಕೊಟ್ಟ ಉದ್ಯಮಿ ಅವರು. ಸಿದ್ದಾರ್ಥ್ ಅವರ ಕಾರ್ಯ ವೈಖರಿ ಹಾಗೂ ಅವರ ಸಾಮಾಜಿಕ ಸೇವೆ ಎಂದಿಗೂ ಎಲ್ಲರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವಂಥದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ.
ಜುಲೈ 29 ಸಂಜೆ ಸಿದ್ದಾರ್ಥ್ ಕಾಣೆಯಾಗಿದ್ದರು. ಅವರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಸುರಕ್ಷಿತವಾಗಿ ವಾಪಸ್ಸಾಗಲಿ ಎಂಬುದು ಎಲ್ಲರ ಹಾರೈಕೆಯಾಗಿತ್ತು. ಆದರೆ ಇಂದು ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್ ಬಳಿ ನೇತ್ರಾವತಿ ಹಿನ್ನೀರಿನಲ್ಲಿ ಸಿದ್ದಾರ್ಥ್ ಮೃತದೇಹ ಪತ್ತೆಯಾಗಿದ್ದು ಎಲ್ಲರ ಶೋಕಕ್ಕೆ ಕಾರಣವಾಗಿದೆ.