ಬೆಂಗಳೂರು:ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳಿಂದ ನಡೆಸಲಾದ ಜಾಗೃತಿ ಜಾಥಾ ಹಾಗೂ ಸಮಾವೇಶಕ್ಕೆ ನಟ ಚೇತನ್ ಬೆಂಬಲ ವ್ಯಕ್ತಪಡಿಸಿದರು.
ಬಳಿಕ ಕಾರ್ಯಕ್ರಮಲ್ಲಿ ಮಾತನಾಡಿದ ಚೇತನ್, ಇಂದು ನಡೆಯುತ್ತಿರುವ ಹೋರಾಟ ಬ್ರಾಹ್ಮಣ್ಯದ ವಿರುದ್ಧದ ಹೋರಾಟ. ಸಸ್ಯಹಾರಿ-ಮಾಂಸಹಾರಿಗಳ ನಡುವಿನ ಹೋರಾಟ ಅಲ್ಲ. ಸಂಗೀತ ನಿರ್ದೇಶಕ ಹಂಸಲೇಖ ಅವರ ಮಾತುಗಳು ನೊಂದ ದಲಿತರ ಪರವಾದ ಮಾತುಗಳು. ಅವರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹಂಸಲೇಖ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇಂದು ಸಂವಿಧಾನ ಸಮರ್ಪಣಾ ದಿನವಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನು ನಾವು ಉಳಿಸಿಕೊಳ್ಳಬೇಕು. ಹಂಸಲೇಖ ಅವರಿಗೆ ಮಾತನಾಡುವ ಹಕ್ಕಿದೆ. ಹಂಸಲೇಖ ಅವರು ಪೊಲೀಸ್ ಠಾಣೆಗೆ ಬಂದಾಗ ಕೆಲವರು ಅವರನ್ನು ಜೈಲಿಗೆ ಹಾಕಿಸುವ ಪ್ರಯತ್ನ ಮಾಡಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ದಮನ ಮಾಡುವ ಹುನ್ನಾರವಿದು ಎಂದು ಹರಿಹಾಯ್ದರು.
ಚಿತ್ರರಂಗದ ವಿರುದ್ಧ ಚೇತನ್ ಗುಡುಗು:
ಚಿತ್ರರಂಗದವರೆಲ್ಲರೂ ಒಂದೇ ಕುಟುಂಬ ಹೇಳುತ್ತಾರೆ. ಅದೇ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಚಿತ್ರರಂಗದ ಯಾವೊಬ್ಬರೂ ಕೂಡ ಧ್ವನಿ ಎತ್ತದೇ ಇರುವುದು ಎಷ್ಟು ಸರಿ ಎಂದು ಚೇತನ್ ಕನ್ನಡ ಚಿತ್ರರಂಗದ ವಿರುದ್ಧ ಕಿಡಿಕಾರಿದರು.