ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗ್ತಿದೆ. ಸದ್ಯ ಕಳೆದೊಂದು ವಾರದಿಂದ ನಿತ್ಯ 7 ಸಾವಿರದೊಳಗೆ ಹೊಸ ಪ್ರಕರಣಗಳು ಪತ್ತೆಯಾಗ್ತಿವೆ. ಈಗಾಗಲೇ ಪಾಸಿಟಿವಿಟಿ ರೇಟ್ ಶೇ. 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್ಲಾಕ್ ಸಡಿಲಿಕೆ ಮಾಡಲಾಗಿದೆ.
ಇದೇ ಜೂನ್ 21ರಂದು ಸರ್ಕಾರ ವಿಧಿಸಿರುವ ಲಾಕ್ಡೌನ್ ಅವಧಿ ಮುಕ್ತಾಯವಾಗಲಿದೆ. ಇದರ ಬೆನ್ನೆಲ್ಲೇ ಸರ್ಕಾರ ಯಾವೆಲ್ಲ ಚಟುವಟಿಕೆಗಳಿಗೆ ರಿಲೀಫ್ ಕೊಡಬಹುದು ಎಂಬ ಚರ್ಚೆ ಶುರುವಾಗಿದೆ. ರಾಜ್ಯಾದ್ಯಂತ ಪಾಸಿಟಿವಿಟಿ ದರ ಶೇ. 4.05ರಷ್ಟು ಇದ್ದರೂ ಜಿಲ್ಲಾವಾರು ಪಾಸಿಟಿವಿಟಿ ದರ ಕಡಿಮೆ ಆಗಿಲ್ಲ. ಹಲವು ಜಿಲ್ಲೆಗಳಲ್ಲಿ ಪಾಸಿಟಿವಿ ರೇಟ್ ಶೇ. 10ರ ಮೇಲೆ ಇದೆ. ಹಾಗೇ ರಾಜ್ಯಾದ್ಯಂತ ಪಾಸಿಟಿವ್ ರೇಟ್ ಕಡಿಮೆ ಆದರೂ ಇನ್ನೂ 1,37,050 ಸಕ್ರಿಯ ಪ್ರಕರಣಗಳುಇವೆ. ಹೀಗಾಗಿ, ಕೊರೊನಾ ಕಡಿಮೆ ಆಯ್ತು ಅಂತ ನಿಟ್ಟುಸಿರು ಬಿಡುವಂತಿಲ್ಲ.
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಹೊಸ ಪ್ರಕರಣಗಳ ಶೇಕಡಾವಾರು ಕಡಿಮೆ ಆಗಿದ್ದರೂ ಸಹ ಸಕ್ರಿಯ ಪ್ರಕರಣದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು ಈ 5 ಜಿಲ್ಲೆಗಳಲ್ಲಿ ಸಕ್ರಿಯ ಕೇಸ್ಗಳು ಹೆಚ್ಚಾಗಿವೆ. ಉಳಿದಂತೆ 14 ಜಿಲ್ಲೆಗಳಲ್ಲಿ 4 ಸಾವಿರದೊಳಗೆ ಇದ್ದರೆ, ಬಾಕಿ 11 ಜಿಲ್ಲೆಗಳಲ್ಲಿ ಮೂರಂಕಿ ಸಕ್ರಿಯ ಪ್ರಕರಣಗಳು ಇವೆ. ಹೀಗಾಗಿ ಹೊಸ ಪ್ರಕರಣಗಳು ಕಡಿಮೆ ಆಗಿವೆಯೇ ಹೊರತು, ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಜನರು ಮೈ ಮರೆತು ಸಹಜ ಸ್ಥಿತಿಗೆ ಮರಳುವುದು ಕಷ್ಟ.