ಬೆಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಕರೆತರಿಸಲಾಗುತ್ತಿದೆ. ಇಂದು ವಿದ್ಯಾರ್ಥಿಗಳನ್ನು ಹೊತ್ತು 7ನೇ ಫ್ಲೈಟ್ ಬಂದಿದೆ. ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ದೆಹಲಿಯಲ್ಲಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿದೇಶಾಂಗ ಕಾರ್ಯದರ್ಶಿ ಜೊತೆ ಸಹ ಮಾತನಾಡಿದ್ದೇನೆ. ಎಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೋ ಅಲ್ಲಿ ಅವರ ರಕ್ಷಣೆ ಮಾಡಲು ಕೇಳಿಕೊಂಡಿದ್ದೇವೆ. ಅವರಿಗೆ ಊಟ ಉಪಚಾರದ ವ್ಯವಸ್ಥೆ ಮಾಡಲು ಸಹ ಹೇಳಿದ್ದೇವೆ. ಅವರ ಲೊಕೇಷನ್ ಎಲ್ಲ ಕಳುಹಿಸಿಕೊಟ್ಟಿದ್ದೇವೆ ಎಂದರು.
ಪಾದಯಾತ್ರೆಯಿಂದ ಉಪಯೋಗವಿಲ್ಲ: ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗೆ ಯಾವುದೇ ಉಪಯೋಗವಿಲ್ಲ. ಇವರ ರಾಜಕೀಯ ಇಚ್ಛಾ ಶಕ್ತಿಯಿಂದ ಬೆಂಗಳೂರಿಗರಿಗೆ ಕಷ್ಟ ಕೊಡುತ್ತಿದ್ದಾರೆ. ಒಂದಲ್ಲ ಮೂರು ದಿನ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಎಲ್ಲರಿಗೂ ಗೊತ್ತಿದೆ. ಇದರಿಂದ ಇನ್ನಷ್ಟು ಟ್ರಾಫಿಕ್ ಜಾಮ್ ಆಗಲಿದೆ. ಫ್ರೀಡಂ ಪಾರ್ಕ್ಗೆ ಬಂದು ಪಾದಯಾತ್ರೆ ಮುಗಿಸಬಹುದಿತ್ತು. ಆದರೆ, ಇವರು ರಾಜಕೀಯಕ್ಕಾಗಿ ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರ ವಿರುದ್ಧ ಡಿಕೆಶಿ ಟೀಕೆ ಕುರಿತು ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಅವರು ಹಲವಾರು ಖಾತೆ ಹೊಂದಿದ್ದ ಹಿರಿಯ ರಾಜಕಾರಣಿ. ಇನ್ನೊಬ್ಬರನ್ನು ಟೀಕೆ ಮಾಡೋದು ಬಹಳ ಸುಲಭ. ಅವರು ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ಏನು ನಡೆಯುತ್ತಿದೆ ಅನ್ನೋದು ಗೊತ್ತಿರಬೇಕು, ಜೊತೆಗೆ ತಮ್ಮ ಪಾತ್ರ ಏನಿದೆ, ತಮ್ಮ ಕರ್ತವ್ಯ ಏನಿದೆ ಅಂತ ವಿಶ್ಲೇಷಣೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ:'ನಮ್ಮನ್ನು ರಕ್ಷಿಸಿ'....ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಅಳಲು!