ದೇವನಹಳ್ಳಿ: ಕೋವಿಡ್ ತಂದಿಟ್ಟಿರುವ ಪರಿಸ್ಥಿತಿಯಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ಅತಂತ್ರವಾಗಿದೆ. ಶಾಲೆಗಳ ಬಾಗಿಲು ತೆರೆಯದೆ ಇರುವುದರಿಂದ ಶಾಲಾ ಆಡಳಿತ ಮಂಡಳಿ ತಮ್ಮ ಶಾಲೆಯ ಶಿಕ್ಷಕರಿಗೆ ಸಂಬಳ ನೀಡಿಲ್ಲ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ಶೋಚನೀಯವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದು, ಸಾವಿರಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. ಲಾಕ್ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಕೆಲವು ಖಾಸಗಿ ಶಾಲೆಗಳು ತಮ್ಮ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಇನ್ನು ಕೆಲವು ಶಾಲೆಗಳು ಅರ್ಧ ಸಂಬಳ ನೀಡುತ್ತಿವೆ. ಮಕ್ಕಳು ಶಾಲಾ ಶುಲ್ಕ ಪಾವತಿ ಮಾಡಲಿಲ್ಲವೆಂದು ಹೇಳುತ್ತಾ ಶಾಲಾ ಆಡಳಿತ ಮಂಡಳಿ ಶಿಕ್ಷಕರನ್ನ ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ ಈ ಬಗ್ಗೆ ಅನೇಕ ಶಿಕ್ಷಕರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಂಗಮಾರೇಗೌಡ, ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳ ಕೊಡದಿದ್ದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳ ನೀಡುವುದು ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ ಆಗಿರುತ್ತದೆ. ಶಾಲೆಗಳಿಗೆ ಸರ್ಕಾರದಿಂದ ಪಾವತಿಸಬೇಕಿದ್ದ ಕಳೆದ ವರ್ಷದ ಆರ್ಟಿಇ ಶುಲ್ಕ ಮರುಪಾವತಿಯ ಶೇಕಡಾ 50ರಷ್ಟನ್ನು ಈಗಾಗಲೇ ಕೊಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಶಾಲಾ ಆಡಳಿತ ಮಂಡಳಿಗೆ ಮಕ್ಕಳಿಂದ ಮೊದಲ ಕಂತಿನ ಶುಲ್ಕ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಶಾಲಾ ಆಡಳಿತ ಮಂಡಳಿ ಯಾವುದೇ ಕಾರಣ ಹೇಳದೆ ತಮ್ಮ ಶಾಲೆಯ ಶಿಕ್ಷಕರಿಗೆ ವೇತನ ನೀಡಬೇಕು. ಒಂದು ವೇಳೆ ಸಂಬಳ ನೀಡದಿದ್ದಲ್ಲಿ ಖಾಸಗಿ ಶಿಕ್ಷಕರು ಲಿಖಿತವಾಗಿ ಅಥವಾ ದೂರವಾಣಿ ಮೂಲಕ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತಂದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಂಗಮಾರೇಗೌಡ ಹೇಳಿದ್ದಾರೆ.