ಕರ್ನಾಟಕ

karnataka

ಡ್ರಗ್ಸ್ ಮಾಫಿಯಾ ಮೂಲದಿಂದಲೇ ಕಿತ್ತು ಹಾಕಲು ಕ್ರಮ: ಬಸವರಾಜ ಬೊಮ್ಮಾಯಿ

By

Published : Mar 19, 2020, 7:21 PM IST

ಬೆಂಗಳೂರು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್​ ಮಾರಾಟ ಹಾಗೂ ಸೇವಿಸುವವರು, ಸಾಗಾಣಿಕೆದಾರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಈ ಮಾಫಿಯಾ ಮಟ್ಟ ಹಾಕಿದರೆ ಅಪರಾಧ ಚಟುವಟಿಕೆ ನಿಯಂತ್ರಣಕ್ಕೆ ಬರಲಿದೆ. ರಾಜ್ಯಾದ್ಯಂತ ಗೂಂಡಾ ಕಾಯ್ದೆ ಜಾರಿಗೆ ತಂದು ಮಾಫಿಯಾ ನಿಯಂತ್ರಿಸುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Basavaraj Bommai
ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯಾದ್ಯಂತ ಬಲವಾಗಿ ಬೇರು ಬಿಟ್ಟಿರುವ ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ ಡ್ರಗ್ಸ್ ಮಾಫಿಯಾ ಬಗ್ಗೆ ವಿಧಾನ ಪರಿಷತ್​ನಲ್ಲಿ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಇಂದು ಡ್ರಗ್ಸ್​ ನಾನಾ ರೂಪದಲ್ಲಿ ಬರುತ್ತಿದೆ. ಸಿಂಥೆಟಿಕ್ ಡ್ರಗ್ಸ್​ ಜನಪ್ರಿಯವಾಗುತ್ತಿದೆ. ಇದು ಏಳೆಂಟು ವರ್ಷದಿಂದ ಹೆಚ್ಚಾಗಿದೆ. ನಮ್ಮ ಸರ್ಕಾರದ್ದು ಝೀರೋ ಟಾಲರನ್ಸ್. 2018ರಲ್ಲಿ 27 ಹಾಗೂ 2019ರಲ್ಲಿ 67 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್​ ಮಾರಾಟ ಹಾಗೂ ಸೇವಿಸುವವರು, ಸಾಗಾಣಿಕೆದಾರರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಇಡೀ ಗುಂಪನ್ನು ಮಟ್ಟ ಹಾಕಿದ್ದೇವೆ ಎಂದರು.

ಇದೊಂದು ಸಂಘಟಿತ ಅಪರಾಧ ಚಟುವಟಿಕೆ. ವಿಸಾ ಅವಧಿ ಮುಗಿದ ಮೇಲೆ ಇಲ್ಲೇ ಇರುವ ವಿದೇಶಿಗರು ಅಪರಾಧ ನಡೆಸುತ್ತಾರೆ. ಆ ಪ್ರಕರಣದಲ್ಲಿ 24 ಗಂಟೆಯಲ್ಲಿ ಜಾಮೀನಿನ ಮೇಲೆ ಆಚೆ ಬಂದು ಆ ಪ್ರಕರಣ ಮುಗಿಯುವವರೆಗೂ ಇಲ್ಲೇ ಇರಬೇಕೆಂಬ ಆಧಾರ ಬಳಸಿಕೊಂಡು ಅಪರಾಧ ಮುಂದುವರೆಸುತ್ತಾರೆ. ಇವರ ವಿರುದ್ಧ ಕಾನೂನು ಕ್ರಮ ಕಠಿಣಗೊಳಿಸುತ್ತಿದ್ದೇವೆ. ಇವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುತ್ತಿದ್ದು, ಎರಡು ವರ್ಷ ಆಚೆ ಬರಲಾಗದು ಎಂದರು.

ಈಗಾಗಲೇ ಆಫ್ರಿಕಾದ ಹೆನ್ರಿ ಎಂಬಾತನನ್ನು ಹಿಡಿದು ಬಾಯಿ ಬಿಡಿಸುತ್ತಿದ್ದೇವೆ. ಬಹಳ ಮಂದಿ ಬಂಧಿತರಾಗಲಿದ್ದಾರೆ. ದೀರ್ಘಾವಧಿ ಅವರನ್ನು ಜೈಲಲ್ಲಿ ಇರಿಸುತ್ತೇವೆ. 6 ತಿಂಗಳಲ್ಲಿ 1,600ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಮಣಿಪಾಲ, ಕಾರವಾರ, ಬೆಳಗಾವಿ ಭಾಗದಲ್ಲೂ ಈ ಮಾಫಿಯಾ ಇದೆ. ಸಮಾಜದ ಸಹಕಾರದೊಂದಿಗೆ ಮಾಫಿಯಾವನ್ನು ಬುಡಸಮೇತ ಕಿತ್ತು ಹಾಕುತ್ತೇವೆ ಎಂದರು.

ವಿದ್ಯಾರ್ಥಿಗಳು ತಮ್ಮ ಕಾಲೇಜು, ಹಾಸ್ಟೆಲ್​ಗಳಲ್ಲಿ ಇಂತಹ ಮಾಫಿಯಾ ಕಂಡು ಬಂದಲ್ಲಿ ತಿಳಿಸಿ, ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ 330 ಮಂದಿಯನ್ನು ಬಂಧಿಸಿದ್ದೇವೆ. 30ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಸಮರೋಪಾದಿಯಲ್ಲಿ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಮಾಫಿಯಾ ಮಟ್ಟ ಹಾಕಿದರೆ ಅಪರಾಧ ಚಟುವಟಿಕೆಯೂ ನಿಯಂತ್ರಣಕ್ಕೆ ಬರಲಿದೆ. ರಾಜ್ಯಾದ್ಯಂತ ಗೂಂಡಾ ಕಾಯ್ದೆ ಜಾರಿಗೆ ತಂದು ಮಾಫಿಯಾ ನಿಯಂತ್ರಿಸುತ್ತಿದ್ದೇವೆ ಎಂದರು.

ABOUT THE AUTHOR

...view details