ಕರ್ನಾಟಕ

karnataka

ETV Bharat / city

ಮಳೆ ನೀರುಕಾಲುವೆ, ರಾಜಕಾಲುವೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಸಚಿವ ಜೆ.ಸಿ. ಮಾಧುಸ್ವಾಮಿ - ಅಮೃತ ನಗರೋತ್ಥಾನ ಯೋಜನೆ

ರಾಜಧಾನಿ ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಕಾಲುವೆ, ರಾಜಕಾಲುವೆಗಳ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಮೀಸಲಿಟ್ಟಿದ್ದು, ಬಿಬಿಎಂಪಿ ವತಿಯಿಂದ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

Minister J.C.Madhuswamy talked in assembly
ವಿಧಾನಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿದರು.

By

Published : Mar 15, 2022, 5:17 PM IST

ಬೆಂಗಳೂರು:ರಾಜಧಾನಿ ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರುಕಾಲುವೆ, ರಾಜಕಾಲುವೆಗಳ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಮೀಸಲಿಟ್ಟಿದ್ದು, ಬಿಬಿಎಂಪಿ ವತಿಯಿಂದ ಸ್ಥಳೀಯ ಅಗತ್ಯಕ್ಕನುಗುಣವಾಗಿ ಕ್ರಿಯಾ ಯೋಜನೆ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ವೇಳೆ ಶಾಸಕ ರಿಜ್ವಾನ್ ಅರ್ಷದ್ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಉತ್ತರಿಸಿದ ಸಚಿವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯಲ್ಲಿ ತುಂಬಿರುವ ಹೂಳು ಮತ್ತು ಘನತ್ಯಾಜ್ಯವನ್ನು ತೆಗೆದು ಮಳೆಗಾಲದಲ್ಲಿ ಉಂಟಾಗುವ ಹಾನಿ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ 160.85 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. 11.83 ಕಿ.ಮೀ ಉದ್ದದ ಪ್ರಥಮ, ದ್ವಿತೀಯ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿದ್ದು, ಪ್ರಸ್ತುತ 98.27 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿಪಡಿಸಲಾಗಿದೆ. ಉಳಿದ 14.56 ಕಿ.ಮೀ ಉದ್ದದ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜಕಾಲುವೆಗಳು ಹಾಳಾಗಿದ್ದು, ಸರಿಪಡಿಸಲು ಕಾಂಕ್ರೀಟ್ ಗೋಡೆ ನಿರ್ಮಾಣವಾಗುತ್ತಿದೆ. ಮಳೆ ನೀರು ಬಂದಾಗ ರಾಜಕಾಲುವೆಗಳಿಂದ ಉಂಟಾಗುವ ಹಾನಿ ತಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು, ಕಾಮಗಾರಿಗಳಲ್ಲಿ ತಾರತಮ್ಯ ಮಾಡುತ್ತಿಲ್ಲ. ಸುಮಾರು 100 ಸ್ಥಳಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಈ ಸಂಬಂಧ ಬಿಡಬ್ಲ್ಯುಎಸ್‍ಎಸ್‍ಬಿ ಜೊತೆ ಸಭೆ ನಡೆಸಲಾಗಿದೆ. ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ರಾಜಕಾಲುವೆಯನ್ನು ಸುಸ್ಥಿತಿಗೆ ತರಲು ರಾಜ್ಯ ಸರ್ಕಾರ 6 ಕೋಟಿ ರೂ. ಒದಗಿಸಿದ್ದು, ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಉಳಿದ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

90 ದಿನಗಳ ಅವಧಿಯೊಳಗೆ ಶುಲ್ಕ ಪಾವತಿಸಲು ಸೂಚನೆ: ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಆನ್‍ಲೈನ್ ಮೂಲಕ ಜಲಧಾರೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದವರಿಗೆ ಬೇಡಿಕೆ ಪತ್ರ ನೀಡಿ 90 ದಿನಗಳ ಅವಧಿಯೊಳಗೆ ಶುಲ್ಕ ಪಾವತಿಸಲು ಸೂಚಿಸಲಾಗಿದೆ ಎಂದು ಎಸ್.ಎಲ್.ಸುಬ್ಬಾರೆಡ್ಡಿ ಪ್ರಶ್ನೆಗೆ ಸಿಎಂ ಪರವಾಗಿ ಸಚಿವ ಮಾಧುಸ್ವಾಮಿ ಉತ್ತರಿಸಿದರು. ಪ್ರೋರೆಟಾ ಶುಲ್ಕ ಪಾವತಿಸಲು ಕೋವಿಡ್‍ನಿಂದ ಒಂದು ತಿಂಗಳು ವಿಸ್ತರಣೆ ಮಾಡಲಾಗಿತ್ತು. ಈಗ ಮೂರು ತಿಂಗಳ ಅವಕಾಶವಿದ್ದು, ವಾಣಿಜ್ಯ ಬಳಕೆಯ ಕಟ್ಟಡಗಳು ಶುಲ್ಕವನ್ನು ಪಾವತಿಸಬೇಕಿದೆ. ವಸತಿ ಗೃಹಗಳಿಗೆ ಪ್ರತಿ ಚದರ್​ಗೆ 400 ರೂ., ವಾಣಿಜ್ಯ ಕಟ್ಟಡಗಳಿಗೆ 600 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಚೆಕ್ ಡ್ಯಾಂ ನಿರ್ಮಾಣ ಬಗ್ಗೆ ಪರಿಶೀಲನೆ: ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಹಾಗೂ ಭಾಗಶಃ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂತರ್ಜಲ 1200 ಅಡಿವರೆಗೂ ಕುಸಿತವಾಗಿದ್ದು, ಕುಣಿಗಲ್ ತಾಲೂಕಿನಲ್ಲಿ ಮಧ್ಯಮ ವಲಯಲ್ಲಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ಅವರ ಪ್ರಶ್ನೆಗೆ ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರಿಸಿದರು. ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂತರ್ಜಲ 750 ಅಡಿಯಿಂದ 1200 ಅಡಿ ಆಳದಲ್ಲಿ ಅಂತರ್ಜಲ ಲಭ್ಯವಾಗುತ್ತಿದೆ. ಚೆಕ್‍ಡ್ಯಾಮ್ ನಿರ್ಮಾಣ ಮಾಡುವ ಬಗ್ಗೆ ನೀರಾವರಿ ಇಲಾಖೆ ಕಾರ್ಯದರ್ಶಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕಾವೇರಿ ನದಿನೀರು ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗಿರುವುದರಿಂದ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details