ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಇರಬಹುದು. ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಅನಿವಾರ್ಯ ಎಂದು ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್ ಒತ್ತಾಯಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಇರಬಹುದು. ಹಾಗಂತ ಅವರಿಗೇನು ವಿಶೇಷ ರಿಯಾಯ್ತಿ ಇದ್ಯಾ?. ಕಾನೂನು ಎಲ್ಲರಿಗೂ ಒಂದೇ. ಯಾರೇ ಇರಲಿ ಕ್ರಮ ಅನಿವಾರ್ಯವಾಗಬೇಕು. ಅವರು, ಇವರು ಅಂತ ಯಾವುದೇ ರೀತಿಯಲ್ಲಿ ಬೇಧಭಾವ ಮಾಡಬಾರದು ಎಂದು ಆಗ್ರಹಿಸಿದರು.
ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಇದ್ದರು ಕ್ರಮ ಅನಿವಾರ್ಯ ಎಂ.ಬಿ.ಪಾಟೀಲ್ ನಾನು ಗೃಹ ಸಚಿವನಾಗಿದ್ದಾಗ ಸಿನಿಮಾ ಇಂಡಸ್ಟ್ರಿ ಬಗ್ಗೆ ದೂರು ಬಂದಿರಲಿಲ್ಲ. ಆದರೆ ಸಿನಿಮಾ, ಮಾಡೆಲ್ ಇಂಡಸ್ಟ್ರಿ ಯಲ್ಲಿ ಡ್ರಗ್ಸ್ ಸ್ವಲ್ಪ ಕಾಮನ್. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಕೆಲ ವೆಬ್ಸೈಟ್ಗಳ ಮೂಲಕ ಡ್ರಗ್ಸ್ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸೈಬರ್ ಕ್ರೈಂ ನವರು ತನಿಖೆ ನಡೆಸಬೇಕು ಎಂದು ಎಂ ಬಿ ಪಾಟೀಲ್ ಒತ್ತಾಯಿಸಿದರು.
ದೆಹಲಿ, ಮುಂಬೈ, ಪಂಜಾಬ್ ನಲ್ಲಿ ಡ್ರಗ್ಸ್ ಹಾವಳಿ ಹೆಚ್ಚು. ಇತ್ತೀಚೆಗೆ ಬೆಂಗಳೂರಿನಲ್ಲೂ ಕೂಡ ಹೆಚ್ಚಿದೆ. ನಾರ್ಕೋಟಿಕ್ಸ್ ವಿಂಗ್ ಗೆ ಇದರ ಮಾಹಿತಿ ಇರುತ್ತದೆ. ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಅಂತ ಅವರಿಗೆ ಗೊತ್ತಿರುತ್ತದೆ. ಆದರೆ ಎಲ್ಲಿ ಮಾರಾಟ ಅನ್ನೋದು ಲೋಕಲ್ ಪೊಲೀಸರಿಗೆ ಗೊತ್ತಿರುತ್ತದೆ. ಹೀಗಾಗಿ ಎರಡೂ ಕಡೆ ಹೆಚ್ಚು ಗಮನಹರಿಸಿದ್ದೆವು.
ನಮ್ಮ ಅವಧಿಯಲ್ಲಿ ಮಣಿಪಾಲ್ ನಲ್ಲೂ ಡ್ರಗ್ಸ್ ದಂಧೆ ನಡೆಯುತ್ತಿರುವ ಆರೋಪಗಳು ಕೇಳಿ ಬಂದಿದ್ದವು. ಡ್ರಗ್ಸ್ ಹಾವಳಿ ಅಲ್ಲಿ ಹೆಚ್ಚಿತ್ತು. ಅಲ್ಲಿ ಭೇಟಿ ಕೊಟ್ಟು ನಿಯಂತ್ರಣಕ್ಕೆ ಮುಂದಾಗಿದ್ದೆ. ಮಣಿಪಾಲ್ ನಲ್ಲಿ ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕಿದ್ದೆ. ಇವತ್ತು ಆನ್ಲೈನ್ ನಲ್ಲೂ ಡ್ರಗ್ಸ್ ಮಾರಾಟ ನಡೆಯುತ್ತಿದೆ. ಸೈಬರ್ ಕ್ರೈಂ ಕೂಡ ಇದರ ಬಗ್ಗೆ ಗಮನಹರಿಸಬೇಕು. ಇದರ ಕಡಿವಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಇದನ್ನು ಇಲ್ಲಿಗೇ ಬಿಡಬಾರದು, ಲಾಜಿಕಲ್ ಎಂಡ್ ಗೆ ಕೊಂಡೊಯ್ಯಬೇಕು ಎಂದು ಹೇಳಿದರು.
ನೆರೆ ನೆರವು ಬಗ್ಗೆ ವಾಗ್ದಾಳಿ: ಉತ್ತರ ಕರ್ನಾಟಕದಲ್ಲಿ ನೆರೆ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ್, ಕಳೆದ ಬಾರಿ 34 ಸಾವಿರ ಕೋಟಿ ನಷ್ಟ ಆಗಿತ್ತು. ಅದರಲ್ಲಿ ಎಷ್ಟು ನೆರವು ರಾಜ್ಯಕ್ಕೆ ಸಿಕ್ಕಿದೆ?. ಪ್ರವಾಹ ಬರುತ್ತೆ, ಹೋಗುತ್ತೆ. ಜನರು ನರಳುತ್ತಾರೆ. ಈವರೆಗೆ ಎಷ್ಟು ಜನರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ. ಕೊರೊನಾ ಒಂದು ನೆಪ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವರು ಕಿಡಿಕಾರಿದರು.
ರಾಜ್ಯದ ಸಂಸದರು, ಸರ್ಕಾರ ಏನು ಮಾಡುತ್ತಿದ್ದಾರೆ. ಸರ್ಕಾರವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲಿನ ಜನ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. ಜನರ ಬದುಕು ಕಟ್ಟಿಕೊಡುವವರು ಯಾರು? ಎಂದು ಪ್ರಶ್ನಿಸಿದರು.