ಬೆಂಗಳೂರು: ಎಸ್‌ಸಿ ಮತ್ತು ಎಸ್ಟಿ ನಕಲಿ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ 1989 (ತಿದ್ದುಪಡಿ ಕಾಯ್ದೆ 2015) ಮತ್ತು ನಿಯಮಗಳು 1995 (ತಿದ್ದುಪಡಿ ನಿಯಮಗಳು 2016) ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಎಸ್‌ಸಿ ಮತ್ತು ಎಸ್ಟಿ ದೌರ್ಜನ್ಯ ಸಮಿತಿ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಲು ನಿರ್ಧಾರ ಮಾಡಿದ್ದೇವೆ. ಕೇಸ್ ಕೊಟ್ಟಾಗ ಅನಗತ್ಯವಾಗಿ ತಡ ಮಾಡುತ್ತಿರುವುದರ ಬಗ್ಗೆ ಸಭೆಯಲ್ಲಿ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ರೀತಿ ಆಗದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಉದ್ಯೋಗ ನೀಡುವ ಅವಧಿ ವಿಸ್ತರಣೆ: ಕೇಸ್ಗಳಲ್ಲಿ ಸಾಕ್ಷಿದಾರರನ್ನು ಹೆದರಿಸುವ ಕೆಲಸ ಆಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ಕೊಡಲಾಗುವುದು. ಎಫ್ಐಆರ್ ಮಾಡುವಾಗ ಮತ್ತು ಚಾರ್ಜ್ ಶೀಟ್ ಹಾಕುವಾಗ ಯಾವುದೇ ಸಮಸ್ಯೆ ಮಾಡಬಾರದು. ಎಸ್‌ಸಿ ಮತ್ತು ಎಸ್ಟಿ ಸರ್ಕಾರಿ ನೌಕರರು ಸತ್ತಾಗ ಅವರ ಕುಟುಂಬಕ್ಕೆ ಉದ್ಯೋಗ ಕೊಡುವಾಗ ಈಗ ಇದ್ದ ಅವಧಿ ವಿಸ್ತರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಅದನ್ನು ಒಂದು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಗೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.