ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನು ನಂಬಿಸಿ, ಮೋಸ ಮಾಡುತ್ತಿದ್ದ ಶೋಕಿಲಾಲನನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುರೇಶ್ ಬಂಧಿತ ಆರೋಪಿ. ದುಡ್ಡಿರುವ ವಿಚ್ಛೇದಿತ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರು. ಮೂಲತಃ ಮೈಸೂರಿನವನಾದ ಈತ ಬೆಂಗಳೂರಲ್ಲಿ ವಾಸವಿದ್ದ. ಮ್ಯಾಟ್ರಿಮೋನಿಯಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, ವಿಚ್ಛೇದಿತ ಮಹಿಳೆಯರ ಪರಿಚಯ ಮಾಡಿಕೊಂಡು ಅವರಿಗೆ ಬಾಳು ಕೊಡುವುದಾಗಿ ಬಲೆ ಬೀಸುತ್ತಿದ್ದ.
ಇತ್ತೀಚೆಗೆ ಬೆಂಗಳೂರಿನ ವಿಚ್ಛೇದಿತ ಮಹಿಳೆಯೊಬ್ಬರಿಗೆ ಪರಿಚಯವಾಗಿ, ಮೊದಲು ತನ್ನ ಬಗ್ಗೆ ಬಹಳಷ್ಟು ಪುಂಗಿ ಊದಿ ನಂಬಿಸಿದ್ದ. ನಂತರ ಮದುವೆಯಾಗಿ ಜೀವನದಲ್ಲಿ ಭದ್ರವಾಗಿ ನೆಲೆಯೂರಲು ನಮಗೆ ಮನೆ ಬೇಕು. ಹೀಗಾಗಿ ಮೊದಲು ಸೈಟ್ ತೆಗೆದುಕೊಳ್ಳಬೇಕು ಎಂದು 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಪಟಾಯಿಸಿದ್ದ. ಆರೋಪಿ ಮಾತಿಗೆ ಮರುಳಾದ ಮಹಿಳೆ, ಮೊದಲು ತನ್ನ ಮಾಂಗಲ್ಯ ಸರ ಸೇರಿದಂತೆ 80 ಗ್ರಾಂ ಒಡವೆ ನೀಡಿದ್ದಾಳೆ. ಒಡವೆ ಕೈಗೆ ಸಿಗುತ್ತಿದ್ದಂತೆ ಫೋನ್ ರಿಸೀವ್ ಮಾಡದೆ ಸುರೇಶ್ ಎಸ್ಕೇಪ್ ಆಗಿದ್ದ.
ಈ ವಿಚಾರವಾಗಿ ಬ್ಯಾಡರಹಳ್ಳಿ ಠಾಣೆಯಲ್ಲಿ ಸುರೇಶ್ ವಿರುದ್ಧ ಮೋಸ ಹೋದ ಮಹಿಳೆ ದೂರು ನೀಡಿದ್ದಳು. ಈ ದೂರಿನ ಅಧಾರದಲ್ಲಿ ಆರೋಪಿಯನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ಈಗಾಗಲೇ ನಾಲ್ವರು ಮಹಿಳೆಯರನ್ನು ಮದುವೆ ಆಗಿರುವುದು ಹಾಗೂ ಹಲವರಿಗೆ ಇದೇ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.