ಬೆಂಗಳೂರು: ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಕಳ್ಳತನದಲ್ಲಿ ಸಕ್ರಿಯರಾಗಿದ್ದ ಇಬ್ಬರು ಬಾಂಗ್ಲಾದೇಶ ಮೂಲದ ಆರೋಪಿಗಳನ್ನು ಕೆಂಪೇಗೌಡ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ನಾಸೀರ್ ಶೇಖ್ ಹಾಗೂ ಒಬೀಮುಲ್ಲಾ ಬಂಧಿತ ಆರೋಪಿಗಳು. ಇವರು ಬಾಂಗ್ಲಾದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಆರೋಪಿಗಳು 5 ವರ್ಷ ಸಜೆ ಅನುಭವಿಸಿ ಬಳಿಕ ಭಾರತಕ್ಕೆ ಅಕ್ರಮವಾಗಿ ನುಸುಳಿ ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.
ನಗರದ ವಿವಿಧೆಡೆ ಸುತ್ತಾಡಿ ದ್ವಿಚಕ್ರ ವಾಹನಗಳನ್ನ ಕದ್ದು ಅವುಗಳ ಮಾರಾಟದಿಂದ ಹಣ ಗಳಿಸುತ್ತಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿರುವ ಕೆಂಪೇಗೌಡ ನಗರ ಠಾಣಾ ಪೊಲೀಸರು 8 ವಿವಿಧ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರ ವಿರುದ್ಧ ವಿದೇಶಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಾಂಗ್ಲಾ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗಿದೆ.
ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು ಅರೆಸ್ಟ್ ದರೋಡೆ ಪ್ರಕರಣ:ಮತ್ತೊಂದು ಪ್ರಕರಣದಲ್ಲಿ, ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ದರೋಡೆಕೋರರನ್ನು ಬಂಧಿಸಿದ್ದಾರೆ. ರೌಡಿಶೀಟರ್ ಚೇತನ್ ಅಲಿಯಾಸ್ ಹಂದಿ ಚೇತು, ನಿರಂಜನ್, ರಾಜು, ಚೇತನ್, ಉಮೇಶ್, ಜಗದೀಶ್ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ವಿಳಾಸ ಹೇಳಿದ ವ್ಯಕ್ತಿಯೇ ಕಿಡ್ನಾಪ್, ರುದ್ರಗೌಡ ಆಪ್ತನ ವಿಚಾರಣೆ
ಕುರುಬರಹಳ್ಳಿ ಸೇತುವೆ ಬಳಿ ಮಾರಾಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಒಂದು ಕಾರು, ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರ ವಿರುದ್ಧ ನಗರದ ಹಲವು ಠಾಣೆಗಳಲ್ಲಿ ಡಕಾಯಿತಿ, ಕೊಲೆ ಯತ್ನ ಪ್ರಕರಣಗಳಿದ್ದು, ಸದ್ಯ ಆರೋಪಿಗಳು ಡಕಾಯಿತಿ ಯತ್ನ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ.