ಆನೇಕಲ್ (ಬೆಂಗಳೂರು): ಕಳೆದ ಶನಿವಾರ ಆನೇಕಲ್ ಭಾಗದ ಚಂದಾಪುರದಲ್ಲಿ ನಡೆದಿದ್ದ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ (ದಾಸ) ಮತ್ತು ಆತನ ಪ್ರೇಯಸಿ ಕಾವ್ಯ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಸೂರ್ಯನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೊಲೆಯಾದ ಕಾವ್ಯ ಅವರ ಪತಿ ಚಿಕ್ಕಹಾಗಡೆ ಮುತ್ತುರಾಜ್ ಬಂಧಿತ ಆರೋಪಿ. ತನ್ನ ಪತ್ನಿಯೊಂದಿಗೆ ನಾರಾಯಣಸ್ವಾಮಿ ವಿವಾಹೇತರ ಸಂಬಂಧ ಹೊಂದಿದ್ದನಂತೆ. ಚಂದಾಪುರದ ರಾಮಯ್ಯ ಬಡಾವಣೆಯ ಮನೆಗೆ ನಾರಾಯಣಸ್ವಾಮಿ ಬಂದಿದ್ದ ಸಂದರ್ಭದಲ್ಲಿ ಹಿಂಬಾಲಿಸಿದ್ದ ಮುತ್ತುರಾಜ್ ಬಾಗಿಲು ಮುರಿದು ಇಬ್ಬರನ್ನು ಚಾಕುವಿನಿಂದ ಇರಿದು ಕೊಲೆಗೈದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.