ಬೆಂಗಳೂರು: ಇಂದಿರಾ ಕ್ಯಾಂಟೀನ್ ಮೂಲಕ ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ ಎಂದು ಬಿಜೆಪಿ ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಇಂದಿರಾ ಕ್ಯಾಂಟೀನ್ ಬಗ್ಗೆ ಭಯ ಹುಟ್ಟಿಸುವ ಕೆಲಸವನ್ನು ಮಾಡಿದ್ದಾರೆ. ಇದು ಎಲೆಕ್ಷನ್ ಗಿಮಿಕ್ ಎಂದು ಮೇಯರ್ ಗಂಗಾಂಬಿಕೆ ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಸುದ್ದಿಗೋಷ್ಟಿ ನಡೆಸಿದರು ಇಂದಿರಾ ಕ್ಯಾಂಟೀನ್ ಊಟದ ಮಾದರಿಯನ್ನು ಲ್ಯಾಬ್ನಲ್ಲಿ ಪರೀಕ್ಷೆ ಮಾಡುವಾಗ ಬಿಬಿಎಂಪಿಯ ಗಮನಕ್ಕೆ ತಂದಿಲ್ಲ. ಅವರೇ ಬೇರೆ ಕಡೆಯ ಊಟವನ್ನು ನಾಲ್ಕೈದು ದಿನ ಇಟ್ಟು ಹಳಸಿದ ಬಳಿಕ ಪರೀಕ್ಷೆ ಮಾಡಿಸಿರುವ ಸಾಧ್ಯತೆಯೂ ಇದೆ ಎಂದು ಆರೋಪಿಸಿದರು. ಊಟದಿಂದ ಜನ ಕಾಯಿಲೆ ಬೀಳ್ತಾರೆಂದು ಸುಳ್ಳು ಆರೋಪ ಮಾಡಿದ್ದಾರೆ. ಈಗ ಬಿಬಿಎಂಪಿ ಆಯುಕ್ತರ ಆದೇಶದ ಮೇರೆಗೆ ಎಲ್ಲಾ ಅಡುಗೆ ಮನೆಗಳ ಆಹಾರವನ್ನು ಲ್ಯಾಬ್ ಟೆಸ್ಟ್ಗೆ ಕಳಿಸಲಾಗ್ತಿದೆ. ಪ್ರತೀ ತಿಂಗಳು ಕಳಿಸೋದಕ್ಕೂ ಮಾತುಕತೆ ನಡೆದಿದೆ ಎಂದರು.
ಈವರೆಗೂ ಒಬ್ಬರೂ ಕಾಯಿಲೆ ಬಿದ್ದಿರುವ ದೂರಿಲ್ಲ. ಆದ್ರೆ ಸುಳ್ಳು ಆರೋಪ ಮಾಡಿರುವ ಉಮೇಶ್ ಶೆಟ್ಟಿ ವಿರುದ್ಧವೇ ತನಿಖೆ ನಡೆಸಲಾಗುವುದು ಎಂದರು. ಇನ್ನು ಇಂದಿರಾ ಕ್ಯಾಂಟೀನ್ನ ಕೆಲವು ಕಡೆ ಸಿಸಿಟಿವಿ ವರ್ಕ್ ಆಗ್ತಿಲ್ಲ. ಇದನ್ನು ಸರಿಪಡಿಸಲು ತಿಳಿಸಲಾಗಿದೆ. ಅಲ್ಲದೆ ಕಡಿಮೆ ಜನ ಗ್ರಾಹಕರು ಬರುವ ಬಗ್ಗೆ ಈಗಾಗ್ಲೇ ಜಂಟಿ ಆಯುಕ್ತರ ಹತ್ತಿರ ತಿಳಿಸಲಾಗಿದೆ. ಎಷ್ಟು ಜನ ಬರ್ತಾರೆ ಅಷ್ಟೇ ಊಟ ಕೊಡುತ್ತಾ ಇರೋದು ಎಂದು ಮೇಯರ್ ಗಂಗಾಂಬಿಕೆ ಸಮರ್ಥಿಸಿಕೊಂಡರು.
ಇನ್ನು ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಎಲೆಕ್ಷನ್ ಉದ್ದೇಶದಿಂದ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಈಗಿರುವ ರಿವಾರ್ಡ್ಸ್ ಹಾಗೂ ಚೆಫ್ ಟಾಕ್ ಗುತ್ತಿಗೆ ರದ್ದು ಮಾಡಿಸಿ ಮೂಲತಃ ಹೋಟೆಲ್ ಉದ್ಯಮಿಯಾದ ಉಮೇಶ್ ಶೆಟ್ಟಿಯವರಿಗೇ ಗುತ್ತಿಗೆ ಪಡೆಯುವ ಉದ್ದೇಶದಿಂದ ಈ ರೀತಿ ಆರೋಪ ಮಾಡಲಾಗ್ತಿದೆ ಎಂದು ಆರೋಪಿಸಿದರು. ಮಹದೇವಪುರದ ಇಂದಿರಾ ಕ್ಯಾಂಟೀನ್ ಆಹಾರ ಪರೀಕ್ಷಿಸಿ, ಆಹಾರದ ಗುಣಮಟ್ಟದ ಬಗ್ಗೆ ಉತ್ತಮ ವರದಿ ಬಂದಿರುವುದಾಗಿ ಮೇಯರ್ ತಿಳಿಸಿದರು.