ಕರ್ನಾಟಕ

karnataka

ETV Bharat / city

ACB Raid... ಬೆಳ್ಳಂಬೆಳಗ್ಗೆ ಎಸಿಬಿ ಬಿಗ್ ಶಾಕ್: ರಾಜ್ಯದೆಲ್ಲೆಡೆ ಏಕಕಾಲಕ್ಕೆ 60 ಕಡೆ ದಾಳಿ

ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ರಾಜ್ಯದೆಲ್ಲೆಡೆ 60 ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟರ‌ ವಿರುದ್ಧ ಸಮರ ಸಾರಿದ್ದಾರೆ.

ACB raids
ACB raids

By

Published : Nov 24, 2021, 8:49 AM IST

Updated : Nov 24, 2021, 10:30 AM IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟರ‌ ವಿರುದ್ಧ ಸಮರ ಸಾರಿರುವ ಎಸಿಬಿ ಅಧಿಕಾರಿಗಳು ರಾಜ್ಯದ 60 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ15 ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

‌15 ಅಧಿಕಾರಿಗಳ ಮೇಲೆ ನಿರಂತರ ದೂರು ಬಂದ ಹಿನ್ನೆಲೆ ದಾಳಿ ನಡೆಸಲಾಗಿದೆ. 8 ಜನ ಎಸ್​ಪಿಗಳು, 100 ಮಂದಿ ಅಧಿಕಾರಿಗಳು, 300 ಸಿಬ್ಬಂದಿ ಸೇರಿ ಒಟ್ಟು 408 ಮಂದಿ ದಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಮನೆ ಮೇಲೆ ದಾಳಿ ಮಾಡಲಾಗಿದೆ‌. ನಾಗರಾಜ್, ಸಕಾಲ ಕೆಎಎಸ್ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ರಾಜಶೇಖರ, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ ಮತ್ತು ಬಿಬಿಎಂಪಿ ಸಿಬ್ಬಂದಿಯಾದ ಬಾಗಲಗುಂಟೆಯ ಗಿರಿ, ಮಾಯಣ್ಣ ಸೇರಿದಂತೆ ಒಟ್ಟು ನಾಲ್ವರ ಮನೆ ಮೇಲೆ ರೇಡ್​ ಆಗಿದೆ.

ಎಸಿಬಿ ದಾಳಿ

ಎಸಿಬಿ ದಾಳಿಗೆ ತುತ್ತಾದ ಸರ್ಕಾರಿ ಅಧಿಕಾರಿಗಳು

1.ಕೆ.ಎಸ್ ಲಿಂಗೇಗೌಡ, ಎಕ್ಸಿಕ್ಯೂಟಿವ್ ಇಂಜಿನಿಯರ್ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರು

2. ಶ್ರೀನಿವಾಸ್ ಕೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್.ಎಲ್.ಬಿ.ಸಿ ಮಂಡ್ಯ

3. ಲಕ್ಷ್ಮಿಕಾಂತಯ್ಯ, ರೆವಿನ್ಯೂ ಇನ್ಸ್​ಪೆಕ್ಟರ್ ದೊಡ್ಡಬಳ್ಳಾಪುರ.

4. ವಾಸುದೇವ್, ಪ್ರಾಜೆಕ್ಟ್ ಮ್ಯಾನೇಜರ್ ನಿರ್ಮಿತಿ ಕೇಂದ್ರ ಬೆಂಗಳೂರು.

5. ಬಿ.ಕೃಷ್ಣಾರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.

6. ಟಿ.ಎಸ್.ರುದ್ರೇಶಪ್ಪ, ಜಾಯಿಂಟ್ ಡೈರೆಕ್ಟರ್, ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಗದಗ

7. ಎ.ಕೆ.‌ಮಸ್ತಿ, ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಡೆಪ್ಯೂಟೇಷನ್, ಬೈಲಹೊಂಗಲ

8. ಸದಾಶಿವ ಮರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್​ಪೆಕ್ಟರ್ ಗೋಕಾಕ್

9. ನಾತಾಜೀ ಹೀರಾಜಿ ಪಾಟೀಲ್, ಗ್ರೂಪ್ ಸಿ ಬೆಳಗಾಂ ಹೆಸ್ಕಾಂ

10. ಕೆ.ಎಸ್.ಶಿವಾನಂದ್, ರಿಟೈರ್ಡ್ ಸಬ್ ರಿಜಿಸ್ಟರ್, ಬಳ್ಳಾರಿ

11. ರಾಜಶೇಖರ್, ಫಿಜಿಯೋಥೆರಪಿಸ್ಟ್, ಯಲಹಂಕ ಸರ್ಕಾರಿ ಆಸ್ಪತ್ರೆ

12. ಮಾಯಣ್ಣ.ಎಂ, ಎಫ್.ಡಿ.ಸಿ ಬಿಬಿಎಂಪಿ ಬೆಂಗಳೂರು ರೋಡ್ಸ್ &ಇನ್ಫ್ರಾಸ್ಟ್ರಕ್ಚರ್

13. ಎಲ್.ಸಿ.ನಾಗರಾಜ್, ಸಕಾಲ, ಅಡ್ಮಿನಿಸ್ಟ್ರೇಷನ್ ಆಫಿಸರ್, ಬೆಂಗಳೂರು

14. ಜಿ.ವಿ.ಗಿರಿ, ಡಿ ಗ್ರೂಪ್ ಸಿಬ್ಬಂದಿ ಬಿಬಿಎಂಪಿ ಯಶವಂತಪುರ

15. ಎಸ್.ಎಂ.ಬಿರಾದಾರ್, ಜಾಯಿಂಟ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಜೇವರ್ಗಿ.

ಎಸಿಬಿ ದಾಳಿ

ಕಲಬುರಗಿ: ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಜೆ.ಇ. ಶಾಂತಗೌಡ ಬಿರಾದಾರ್ ಅವರ ಮನೆ, ಕಚೇರಿ, ತೋಟದ ಮನೆ ಮೇಲೆ ದಾಳಿ ನಡೆಸಲಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಶಾಂತಗೌಡ ಬಿರಾದಾರ್‌ ಅವರ ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸದ್ಯಕ್ಕೆ ಅಧಿಕಾರಿಗಳು, ಶಾಂತಗೌಡ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆ ಮೇಲೆ ದಾಳಿ

ದಾವಣಗೆರೆ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬಿಸಿ ಮುಟ್ಟಿಸಿದೆ‌. ಗದಗ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಟಿ.ಎಸ್.ರುದ್ರೇಶಪ್ಪ ಮನೆ ಹಾಗೂ ಕಚೇರಿ ಸೇರಿದಂತೆ ಏಕಕಾಲಕ್ಕೆ ಐದು ಕಡೆ ದಾಳಿ ನಡೆಸಲಾಗಿದೆ.

ರುದ್ರೇಶಪ್ಪನವರ ಶಿವಮೊಗ್ಗ ಚಾಣಕ್ಯ ನಗರದ ವಾಸದ ಮನೆ ಸೇರಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸ್ವಗ್ರಾಮ ತಣಿಗೆರೆಯಲ್ಲೂ ದಾಳಿ ನಡೆಸಿದ್ದಾರೆ. ದಾವಣಗೆರೆ ಎಸಿಬಿ ಎಸ್​ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಲಾಗಿದೆ.

ಬೆಳಗಾವಿಯಲ್ಲಿ ಮೂರು ಕಡೆ ಎಸಿಬಿ ದಾಳಿ

ಬೆಳಗಾವಿ: ಜಿಲ್ಲೆಯ ಮೂವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಸದಾಶಿವ ಮರಲಿಂಗಣ್ಣವರ್ ಮನೆ ಹಾಗೂ ಕಚೇರಿ ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಲಾಗಿದೆ. ಸದಾಶಿವ ಅವರು ಆರ್‌ಟಿಒದಲ್ಲಿ ಮೋಟಾರ್ ವಾಹನ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬೈಲಹೊಂಗಲ ಪಟ್ಟಣದ ಅಡಿವಿ ಸಿದ್ದೇಶ್ವರ ಮಾಸ್ತಿ ಎಂಬುವರ ಮನೆ ಮೇಲೂ ಸಹ ದಾಳಿ ನಡೆಸಲಾಗಿದೆ. ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿಯಾಗಿ ಅಡಿವಿ ಸಿದ್ದೇಶ್ವರ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಗಾವಿ ನಗರದ ನಾತಾಜಿ ಪಾಟೀಲ್ ಮನೆ, ಕಚೇರಿ ಮೇಲೆ ದಾಳಿ ಆಗಿದೆ. ಇವರು ಹೆಸ್ಕಾಂ ನಲ್ಲಿ ಲೈನ್ ಮೆಕ್ಯಾನಿಕ್ ವಿಭಾಗದಲ್ಲಿದ್ದಾರೆ. ಇವರ ಕಚೇರಿ ಮನೆ ಸೇರಿದಂತೆ ಮೂರು ಕಡೆ ದಾಳಿ ಮಾಡಲಾಗಿದೆ. ಎಸಿಬಿ ಎಸ್‌ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಮಂಗಳೂರು:ಇಂದು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಲಿಂಗೇಗೌಡ ಅವರ ಮನೆ ಮೇಲೆ ಎಸಿಬಿ, ದಾಳಿ ನಡೆಸಿದ್ದು ದಾಖಲೆಗಳ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಫಿಸಿಯೋಥೆರಪಿಸ್ಟ್ ಕ್ಲಿನಿಕ್ ಮೇಲೆ ಎಸಿಬಿ ದಾಳಿ :

ಯಲಹಂಕ: ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಜಶೇಕರ್​ ಅವರ ಕ್ಲಿನಿಕ್ ಮತ್ತು ನಿವಾಸದ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಯಲಹಂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರಾಜಶೇಕರ್​, ಕೊರೊನಾ ಸಮಯದಲ್ಲಿ 3 ಬಿಡಿಎ ಸೈಟ್ , 2 ರೆವೆನ್ಯೂ ಸೈಟ್, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 5 ಎಕರೆ ಜಮೀನು ಖರೀದಿಸಿದ್ದ. ಈ ಹಿನ್ನೆಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಯಲಹಂಕದ ಸಂತೆ ಸರ್ಕಲ್ ಬಳಿಯ ರಾಜಶೇಕರ್ ನಿವಾಸ ಮತ್ತು ಕ್ಲಿನಿಕ್ ಮೇಲೆ ದಾಳಿನಡೆಸಿರುವ ಅಧಿಕಾರಿಗಳು, ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Last Updated : Nov 24, 2021, 10:30 AM IST

ABOUT THE AUTHOR

...view details