ಬೆಂಗಳೂರು :ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ಮಾಡಿ (ACB raid on BDA office) ನೂರಾರು ಕೋಟಿ ಅಕ್ರಮ ಅವ್ಯವಹಾರ ಬಯಲಿಗೆಳೆದಿರುವ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳು ಎರಡು ದಿನಗಳ ಸರ್ಕಾರಿ ರಜೆ ಬಳಿಕ ನಾಳೆಯು (ನ.23) ಕಚೇರಿಯಲ್ಲಿ ದಾಳಿ ಮುಂದುವರೆಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಎಸಿಬಿ ಅಧಿಕಾರಿಗಳ ಬಳಿಯೇ ಇರುವ ಬಿಡಿಎ ಕಚೇರಿ ಬೀಗದ ಕೈ :ಎರಡು ದಿನಗಳ ಸರ್ಕಾರಿ ರಜೆ ಹಿನ್ನೆಲೆ ಬಿಡಿಎ ಕಚೇರಿಯ (BDA Office) ಬೀಗದ ಕೈ ಸಹ ತಮ್ಮ ವಶದಲ್ಲಿ ಎಸಿಬಿ ಅಧಿಕಾರಿಗಳು ಇಟ್ಟುಕೊಂಡಿದ್ದಾರೆ.
ನ.25ರವರೆಗೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ (Search Warrent) ಪಡೆದಿರುವ ಎಸಿಬಿ ನಾಳೆಯು ಸಹ ಬಿಡಿಎ ಕಚೇರಿಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಗತ್ಯಬಿದ್ದರೆ ಮತ್ತೆ ಸರ್ಚ್ ವಾರೆಂಟ್ ಪಡೆದು ಹೆಚ್ಚು ದಿನಗಳನ್ನು ನೀಡುವಂತೆ ಕೋರ್ಟ್ಗೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ಸಹ ಹೇಳಲಾಗುತ್ತಿದೆ.
ನಾಳೆ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭ :ಮೂವರು ಎಸ್ಪಿಗಳ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ನಾಳೆ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಆರಂಭವಾಗಲಿದೆ. ಬಿಡಿಎ ಕಚೇರಿಯಲ್ಲಿರುವ ನಾಲ್ಕೈದು ವರ್ಷಗಳ ಹಿಂದಿನ ಫೈಲ್ಗಳನ್ನು ಕೂಡ ಎಸಿಬಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.