ಬೆಂಗಳೂರು:ಭಯೋತ್ಪಾದನೆ ಸಂಘಟನೆಯಲ್ಲಿ ಗುರುತಿಸಿಕೊಂಡು ರಾಜಧಾನಿಯಲ್ಲಿ ಕಳೆದ ಎರಡು ವರ್ಷಗಳಿಂದ ಅವಿತುಕೊಂಡಿದ್ದ ಉಗ್ರನನ್ನು ಒಂದು ವಾರದ ಹಿಂದೆ ಜಮ್ಮು- ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಆಗಿದ್ದ ತಾಹಿಬ್ ಹುಸೇನ್ ಬಂಧಿತ ಉಗ್ರನಾಗಿದ್ದಾನೆ.
ಹುಸೇನ್ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಓಕಳಿಪುರಂ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ತಮ್ಮ ಹೆಸರು ಗೊತ್ತಾಗದಂತೆ ಎಚ್ಚರವಹಿಸಿದ್ದ ಉಗ್ರ ತಾರೀಕ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಈತನ ಪತ್ತೆಗಾಗಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ನಿರಂತರವಾಗಿ ಶೋಧ ನಡೆಸಿದ್ದರೂ ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಬೆಂಗಳೂರಿನಲ್ಲಿ ಉಗ್ರನ ಕುಟುಂಬ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದರು. ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿ 15 ದಿನಗಳ ಹಿಂದೆ ಬೆಂಗಳೂರಿಗೆ ಬಂದ ಇನ್‌ಸ್ಪೆಕ್ಟರ್, ಪಿಎಸ್ಐ ಹಾಗೂ ಇಬ್ಬರು ಕಾನ್ಸ್ಟೇಬಲ್ಗಳು ಮಫ್ತಿಯಲ್ಲಿ ಎರಡು ದಿನಗಳ ಕಾಲ ಮಸೀದಿ ಸುತ್ತಮುತ್ತ ಕಾರ್ಯಾಚರಣೆ ನಡೆಸಿದ್ದಾರೆ. ಓಕಳಿಪುರ ಬಳಿ ಮಸೀದಿ ಅಂಟಿಕೊಂಡಂತೆ ಬಾಡಿಗೆ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ರಾಜ್ಯ ಗುಪ್ತಚರ ಇಲಾಖೆಯು ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದೆ. ಕೂಡಲೇ ಶ್ರೀರಾಮಪುರ ಪೊಲೀಸರಿಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಅಂಜನ್ ರಾಜ್ ವತ್ ಮತ್ತು ತಂಡ ಜೂನ್ 29 ರಾತ್ರಿ ಮನೆಯಲ್ಲೇ ಇರುವಾಗಲೇ ವಶಕ್ಕೆ ಪಡೆದುಕೊಂಡು ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.