ಕರ್ನಾಟಕ

karnataka

'ಉಪಸಭಾಪತಿ ಧರ್ಮೇಗೌಡರ ಸಾವಿಗೆ ವಿಧಾನ ಪರಿಷತ್​​ನ ಎಲ್ಲಾ ಸದಸ್ಯರೇ ಕಾರಣ': ಆಪ್

By

Published : Dec 30, 2020, 3:44 PM IST

"ಧರ್ಮೇಗೌಡರು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯಿಂದ ಘಾಸಿಗೊಳಗಾಗಿದ್ದರು" ಎಂದು ಹಲವು ನಾಯಕರು ಹೇಳಿಕೆ ನೀಡಿದ್ದರು. ಇದೇ ಅವರನ್ನು ಇನ್ನಷ್ಟು ಕುಗ್ಗುವಂತೆ ಮಾಡಿತ್ತು ಎಂದು ಆಮ್​ ಆದ್ಮಿ ಪಕ್ಷ ಹೇಳಿದೆ.

Mohan Dasari
ಮೋಹನ್ ದಾಸರಿ

ಬೆಂಗಳೂರು: ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವದಿಂದ ಮತ್ತೊಂದು ದುರ್ಘಟನೆ ನಡೆದಿದ್ದು, ಉಪಸಭಾಪತಿ ಧರ್ಮೇಗೌಡ ಅವರು ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಎಲ್ಲಾ ಸದಸ್ಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣ. ಈ ಕೂಡಲೇ ಎಲ್ಲಾ ಸದಸ್ಯರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ನಡೆದ ಜಟಾಪಟಿಯನ್ನು ಇಡೀ ರಾಜ್ಯದ ಜನ ಮಾಧ್ಯಮಗಳ ಮೂಲಕ ನೋಡಿದ್ದಾರೆ. ಈ ಜಟಾಪಟಿ ವೇಳೆ ಉಪಸಭಾಪತಿ ಧರ್ಮೇಗೌಡರನ್ನು ಅನೇಕ ಸದಸ್ಯರು ಎಳೆದಾಡಿದ್ದರು. ಇದಕ್ಕೆ ಸಾಕಷ್ಟು ವಿಡಿಯೋ ದಾಖಲೆಗಳಿವೆ, ಫೋಟೋಗಳಿವೆ. ಈ ವೇಳೆ ಸೂಕ್ಷ್ಮ ಮನಸ್ಸಿನ ಧರ್ಮೇಗೌಡರಿಗೆ ಘಾಸಿಯಾಗಿ ಈ ದುರ್ಘಟನೆ ನಡೆದಿದೆ. ಇತರ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರನ್ನು ಬಂಧಿಸುವ ಪೊಲೀಸರು ಈಗ ಏಕೆ ಮೌನವಾಗಿದ್ದಾರೆ? ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಿ ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು, ಸಭಾಪತಿ ಇಲ್ಲದ ವೇಳೆ ಕುರ್ಚಿಯಲ್ಲಿ ಕೂರಬೇಡ ಎಂದು ಹೇಳಿದ್ದರೂ ಅವರಿಗೆ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಡದಿಂದ ಕುಳಿತು ಅವಮಾನ ಅನುಭವಿಸುವಂತಾಯಿತು. "ಧರ್ಮೇಗೌಡರು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯಿಂದ ಘಾಸಿಗೊಳಗಾಗಿದ್ದರು" ಎಂದು ದೇವೇಗೌಡರಾದಿಯಾಗಿ ಅನೇಕ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಅವಮಾನಕ್ಕೆ ಒಳಗಾಗಿದ್ದ ಧರ್ಮೇಗೌಡರ ಬಳಿ ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರು ಮಾತನಾಡಿ, ಈ ಘಟನೆಗಳು ಸಾಮಾನ್ಯ ಎಂದು ಹೇಳಿ ಸಮಾಧಾನ ಮಾಡಲಾಗಿತ್ತು. ಆದರೂ ಘನತೆವೆತ್ತ ಈ ಹುದ್ದೆಗೆ ಎಲ್ಲಾ ಸದಸ್ಯರು ಸೇರಿ ಮಾಡಿದ ಅವಮಾನದಿಂದ ಸೂಕ್ಷ್ಮ ಮನಸ್ಸಿನ ವ್ಯಕ್ತಿಗೆ ಸಾರ್ವಜನಿಕವಾಗಿ ಅವಮಾನವಾಗಿ ಈ ದುರ್ಘಟನೆ ನಡೆದಿದೆ. ಈ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಹೊಸ ವರ್ಷಾಚರಣೆಯ ಮಾರ್ಗಸೂಚಿ ಪಾಲನೆ ಕಡ್ಡಾಯ: ಗೃಹ ಸಚಿವ ಬೊಮ್ಮಾಯಿ

ಜನಸಾಮಾನ್ಯ ಮಾಸ್ಕ್ ಹಾಕಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ ಇಂತಹ ಘೋರ ಘಟನೆ ನಡೆದರೂ ಏಕೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ABOUT THE AUTHOR

...view details