ಬೆಂಗಳೂರು:ರಾಜ್ಯದ ಮೂರೂ ರಾಜಕೀಯ ಪಕ್ಷಗಳಲ್ಲಿ ಕ್ಲೀನ್ ಇಮೇಜ್ ಇರುವವರಿಗೆ ಆಮ್ ಆದ್ಮಿ ಪಕ್ಷದ ನೇತಾರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಾಳ ಹಾಕಿದ್ದಾರೆ. ರೈತ ಸಂಘಟನೆ ಇದೀಗ ದೊಡ್ಡ ಮಟ್ಟದಲ್ಲಿ ಆಮ್ ಆದ್ಮಿ ಪಕ್ಷದ ಮುಖವಾಣಿಯಾಗಿ ನಿಲ್ಲಲು ತೀರ್ಮಾನಿಸಿದೆ.
ದೆಹಲಿ, ಪಂಜಾಬ್, ಗುಜರಾತ್, ಹರಿಯಾಣ ರಾಜ್ಯಗಳ ನಂತರ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವ ಅರವಿಂದ ಕೇಜ್ರಿವಾಲ್, ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 50 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಹಾಗಾಗಿ, ಕ್ಲೀನ್ ಇಮೇಜ್ ಇರುವ ನಾಯಕರ ತಲಾಶ್ ಮಾಡುತ್ತಿದ್ದಾರೆ.
ಈ ಉದ್ದೇಶದೊಂದಿಗೆ ಜೆಡಿಎಸ್‍ನಿಂದ ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಎಸ್.ಆರ್.ಪಾಟೀಲ್, ಸಂಯುಕ್ತ ಜನತಾದಳದ ಡಾ.ಎಂ.ಪಿ. ನಾಡಗೌಡ ಸೇರಿದಂತೆ ಹಲವು ಮಂದಿ ನಾಯಕರನ್ನು ಈಗಾಗಲೇ ಕೇಜ್ರಿವಾಲ್ ಸಂಪರ್ಕಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಧಿಕಾರಿಗಳೇ ಬಂಡವಾಳ:ಇದೇ ರೀತಿ ಹಲವು ಐ.ಎ.ಎಸ್ ಹಾಗೂ ಐ.ಪಿ.ಎಸ್ ಅಧಿಕಾರಿಗಳು ಸರ್ಕಾರದ ಮುಂದೆ ಸ್ವಯಂನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಅಮ್ ಆದ್ಮಿ ಪಕ್ಷ ಸೇರಲು ಕಾತರರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಇಡೀ ದೇಶದ ಗಮನ ಸೆಳೆಯುವ ಹೋರಾಟ ಸಂಘಟಿಸಿದ ನಂತರ ಅಮ್ ಆದ್ಮಿ ಪಕ್ಷ ದೆಹಲಿಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿತ್ತು. ಮತ್ತು ಎರಡನೇ ಬಾರಿಯೂ ಅಧಿಕಾರ ಹಿಡಿಯುವಲ್ಲಿ ಯಶ ಕಂಡಿದೆ.
ಈ ಮಧ್ಯೆ ಇತ್ತೀಚೆಗೆ ನಡೆದ ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಗೆಲುವಿನ ಕನಸು ಕಾಣುತ್ತಿದ್ದ ಬಿಜೆಪಿಯನ್ನು ಮಣಿಸಿದ ಅಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿದಿದೆ. ಇದೇ ರೀತಿ ನರೇಂದ್ರ ಮೋದಿ ಅವರ ಶಕ್ತಿ ಕೇಂದ್ರವಾದ ಗುಜರಾತ್ ರಾಜ್ಯದಲ್ಲೂ ಅಮ್ ಆದ್ಮಿ ಪಕ್ಷ ಬೇರು ಬಿಡುತ್ತಿದ್ದು, ಹರಿಯಾಣದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದೆ.
ಐವತ್ತು ಹೆಚ್ಚಾದರೆ ನೂರು:ಗೋವಾ ರಾಜ್ಯದಲ್ಲೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದೇ ಉತ್ಸಾಹದಲ್ಲಿ ಇದೀಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. 2023 ರ ಚುನಾವಣೆಯಲ್ಲಿ ದೊಡ್ಡ ಮಟ್ಟದ ಯಶಸ್ಸಿನ ಕನಸು ಬೇಡ. ಬದಲಿಗೆ 2028 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಿ ಎಂದು ತಮ್ಮ ಸಂಪರ್ಕಕ್ಕೆ ಬಂದ ರಾಜ್ಯದ ನಾಯಕರಿಗೆ ಅರವಿಂದ ಕೇಜ್ರಿವಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.