ಬೆಂಗಳೂರು: ಎಸಿಬಿ ಮೇಲಿನ ಭ್ರಷ್ಟಾಚಾರ ಆರೋಪವನ್ನು ತೀವ್ರ ತರಾಟೆಗೆ ತೆಗೆದುಕೊಂಡು ವರ್ಗಾವಣೆ ಬೆದರಿಕೆ ವಿಚಾರವನ್ನು ಬಹಿರಂಗವಾಗಿ ತಿಳಿಸಿರುವ ನ್ಯಾ.ಎಚ್.ಸಿ.ಸಂದೇಶ್ ಅವರನ್ನು ಬುಧವಾರ ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಮುಖಂಡರು ಭೇಟಿ ಮಾಡಿ, ನೈತಿಕ ಬೆಂಬಲ ವ್ಯಕ್ತಪಡಿಸಿದರು.
ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, "ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿ. ಭ್ರಷ್ಟ ಬಿಜೆಪಿಯ 40% ಸರ್ಕಾರವು ಉಚ್ಚ ನ್ಯಾಯಾಲಯವನ್ನೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಅವ್ಯಾಹತವಾಗಿ ಅಕ್ರಮ ನಡೆಸಲು ಯತ್ನಿಸುತ್ತಿದೆ. ನ್ಯಾಯಾಧೀಶರ ಮೇಲೆ ಒತ್ತಡ ಹಾಕುವ ಮೂಲಕ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿದೆ. ಸರ್ಕಾರದ ಕುತಂತ್ರಕ್ಕೆ ಮಣಿಯದ ನ್ಯಾ.ಎಚ್.ಸಿ.ಸಂದೇಶ್ ಅವರಿಗೆ ಪಕ್ಷವು ನೈತಿಕ ಬೆಂಬಲ ನೀಡುತ್ತಿದೆ" ಎಂದರು.