ಬೆಂಗಳೂರು: ಶಾಸಕ ಅರವಿಂದ್ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಿಕೊಂಡು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದು, ಅನ್ಯಾಯವನ್ನು ಪ್ರಶ್ನಿಸುವವರನ್ನು ತುಳಿಯಲು ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎನ್ನುವುದಕ್ಕೆ ಎಎಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದೇ ಸಾಕ್ಷಿ ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಡಿ.ಬಸವರಾಜು ಹೇಳಿದರು.
ಲಿಂಬಾವಳಿ ಯಾವ ಮಟ್ಟಕ್ಕಾದ್ರೂ ಇಳಿಯುತ್ತಾರೆ ಎನ್ನುವುದಕ್ಕೆ ಎಫ್‌ಐಆರ್ ಸಾಕ್ಷಿ: ಆಪ್ ಮುಖಂಡ - ರಾಜಕಾಲುವೆ ಒತ್ತುವರಿ
ಎಎಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಶಾಸಕ ಅರವಿಂದ್ ಲಿಂಬಾವಳಿ ವಿರುದ್ಧ ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಹೆಚ್.ಡಿ. ಬಸವರಾಜು ಕಿಡಿಕಾರಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿಯಿಂದಾಗಿ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಜನರು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಖಂಡಿಸಿ ನವೆಂಬರ್ 21ರಂದು ಆಮ್ ಆದ್ಮಿ ಪಾರ್ಟಿ ಪಾದಯಾತ್ರೆ ನಡೆಸಿತ್ತು. ಇದಕ್ಕೆ ಸ್ಥಳೀಯರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ವಿಚಲಿತರಾಗಿರುವ ಶಾಸಕ ಲಿಂಬಾವಳಿಯವರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಎಎಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಎಎಪಿಯು ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿರುವುದಕ್ಕೆ ಲಿಂಬಾವಳಿ ಎಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದರು.
ಆಮ್ ಆದ್ಮಿ ಪಾರ್ಟಿಯ ವಕೀಲರ ವಿಭಾಗದ ಹಿರಿಯ ಮುಖಂಡ ಜಗದೀಶ್ ಮಹದೇವ್ ಮಾತನಾಡಿ, ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ಮನೋಹರ್ ರೆಡ್ಡಿ, ಅಶೋಕ್ ಮೃತ್ಯುಂಜಯ, ಮೋಹನ್ ದಾಸರಿ, ಜಗದೀಶ್ ವಿ. ಸದಂ ಹಾಗೂ ಇತರರನ್ನು ಪ್ರಕರಣದಲ್ಲಿ ಆರೋಪಿ ಮಾಡಲಾಗಿದೆ. ಮಕ್ಕಳು ಪಾದಯಾತ್ರೆಯಲ್ಲಿ ಭಾಗವಹಿಸಿರುವುದನ್ನು ಮಹಾಪರಾಧ ಎಂಬಂತೆ ಬಿಂಬಿಸಿ, ಅದಕ್ಕೆ ಎಎಪಿ ಮುಖಂಡರನ್ನು ಹೊಣೆ ಮಾಡಲಾಗಿದೆ. ರಾಜಕಾಲುವೆ ಒತ್ತುವರಿಯಿಂದ ಮಕ್ಕಳು ಆಟವಾಡುವ ಜಾಗದಲ್ಲೂ ನೀರು ನಿಂತಿದ್ದು, ಇದರಿಂದ ನೊಂದ ಮಕ್ಕಳು ಪೋಷಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತೆರಿಗೆ ಕಟ್ಟುವ ಮೂಲಕ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಪ್ರಜ್ಞಾವಂತ ನಾಗರಿಕರು ಪಾಲ್ಗೊಂಡಿದ್ದರು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು ಮಕ್ಕಳು ಸೇರಿದಂತೆ ಎಲ್ಲರಿಗೂ ಇದೆ ಎಂಬುದನ್ನು ಲಿಂಬಾವಳಿ ಅರ್ಥ ಮಾಡಿಕೊಳ್ಳಬೇಕು ಎಂದರು.