ಬೆಂಗಳೂರು: ಕ್ಷುಲ್ಲಕ ವಿಚಾರಕ್ಕಾಗಿ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ನೇಪಾಳ ಮೂಲದ ಮಿಲನ್ ಬರಲ್(25) ಕೊಲೆಯಾದ ಯುವಕ.
ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಮಿಲನ್, ತರಕಾರಿ ಕತ್ತರಿಸಲು ಬಳಸುತ್ತಿದ್ದ ಚಾಕುವನ್ನ ಆತನ ಸಹದ್ಯೋಗಿ ಸ್ನೇಹಿತ ಆರ್ಯನ್ ಪುಷ್ಕರ್(20) ಎಂಬಾತ ತೆಗೆದುಕೊಂಡಿದ್ದ. ಇದೇ ವಿಚಾರವಾಗಿ ಮಧ್ಯಾಹ್ನ ಇಬ್ಬರ ನಡುವೆ ರೆಸ್ಟೋರೆಂಟಿನ ಅಡುಗೆ ಕೋಣೆಯಲ್ಲೇ ಮಾರಾಮಾರಿ ಆರಂಭವಾಗಿದೆ. ಈ ವೇಳೆ ಅರೋಪಿ ಆರ್ಯನ್ ಪುಷ್ಕರ್ ಅದೇ ಚಾಕುವಿನಿಂದ ಮಿಲನ್ಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಮಿಲನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.