ದೇವನಹಳ್ಳಿ: ಚಾಕು ತೋರಿಸಿ ಸರಗಳ್ಳತನ್ಕಕೆ ಯತ್ನಿಸಿದ ಖದೀಮನಿಗೆ ದಿಟ್ಟ ಮಹಿಳೆಯೊಬ್ಬರು ತಕ್ಷ ಪಾಠ ಕಲಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಕೊಯಿರಾ ಗ್ರಾಮದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಾಕು ತೋರಿಸಿ ಕತ್ತಿಗೆ ಕೈ ಹಾಕಿದ ಕಳ್ಳ... ದಿಟ್ಟ ಮಹಿಳೆಯ ಧೈರ್ಯಕ್ಕೆ ಹೆದರಿ ಪರಾರಿ! - ಸರಗಳ್ಳನ ಹಿಮ್ಮೆಟ್ಟಿಸಿದ ಮಹಿಳೆ
ಚಾಕು ತೋರಿಸಿ ಕಳ್ಳತನಕ್ಕೆ ಯತ್ನಿಸಿದ ಖದೀಮನನ್ನು ಮಹಿಳೆಯೊಬ್ಬರು ಧೈರ್ಯದಿಂದ ಹಿಮ್ಮೆಟ್ಟಿಸಿದ ಘಟನೆ ನಡೆದಿದೆ.
ಗ್ರಾಮದ ನವಿತಾ ದಿಟ್ಟತನ ತೋರಿದ ಮಹಿಳೆ. ಅವರು ತಮ್ಮ ಮನೆಯ ಬಳಿ ಶುಕ್ರವಾರ 8.30ರ ಸುಮಾರಿಗೆ ಒಬ್ಬರೇ ಇದ್ದರು. ಅವರ ಪತಿ ದೇವರಾಜು ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಅತ್ತೆ ಮನೆಯೊಳಗಡೆ ಇದ್ದರು. ಮನೆ ಹೊರಗೆ ನವಿತಾ ಒಬ್ಬರೇ ಇದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ಬಂದು ಚಾಕು ತೋರಿಸಿ ಕತ್ತಿನಲ್ಲಿದ್ದ ಸರ ಕೀಳಲು ಯತ್ನಿಸಿದ್ದಾನೆ. ಆಗ, ತೀವ್ರ ಪ್ರತಿರೋಧ ತೋರಿದ ನವಿತಾ, ಆತನ ಬಳಿಯಿದ್ದ ಚಾಕುವನ್ನೇ ಕಿತ್ತುಕೊಂಡಿದ್ದಾರೆ. ಜೊತೆಗೆ ಸರಗಳ್ಳನ ಕೈ ಸೇರಿದ್ದ ತಮ್ಮ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಅರ್ಧ ಸರ ತುಂಡಾಗಿ ಇವರ ಕೈಗೆ ಬಂದಿದೆ.
(ಕಾಶ್ಮೀರದಲ್ಲಿ ಎನ್‌ಕೌಂಟರ್; ಮೂವರು ಉಗ್ರರ ಹತ್ಯೆ)
ನವಿತಾ ಅವರ ಪ್ರತಿದಾಳಿಗೆ ಹೆದರಿದ ಕಳ್ಳ ತನ್ನ ಕೈಯಲ್ಲಿದ್ದ ಮಾಂಗಲ್ಯ, ಎರಡು ಗುಂಡುಗಳು ಜೊತೆಗೆ ಅರ್ಧ ಸರವನ್ನು ತೆಗೆದುಕೊಂಡು ಓಡಿ ಹೋಗಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ನವಿತಾ ಅವರ ಮನೆ ಬಳಿ ಬಂದು ಕಳ್ಳ ಓಡಿ ಹೋದ ರಸ್ತೆಯಲ್ಲಿ ಹುಡುಕಾಡಿದರೂ ಆತನ ಸುಳಿವು ಸಿಕ್ಕಿಲ್ಲ.
ಕಳ್ಳನ ಚಾಕು ಸಮೇತ ವಿಶ್ವನಾಥಪುರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ನವಿತಾ ಬಂದಿದ್ದಾರೆ. ಆರಂಭದಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು, ನವಿತಾ ಕುಟುಂಬದವರು ಒತ್ತಾಯಿಸಿದ ನಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.