ಕರ್ನಾಟಕ

karnataka

ETV Bharat / city

ಹೆದ್ದಾರಿಗಳಲ್ಲಿರುವ ಮರಗಳ ಪುನಶ್ಚೇತನಕ್ಕೆ ವಿಶೇಷ ವ್ಯವಸ್ಥೆ: ಸಚಿವ ಸಿ.ಸಿ. ಪಾಟೀಲ್ ಹೇಳಿಕೆ - special system for rehabilitating trees on highways

6 ರಸ್ತೆ ಅಗಲೀಕರಣ ಯೋಜನೆಗಳಲ್ಲಿ 2,100ರಲ್ಲಿ ಈಗಾಗಲೇ 1500 ಮರಗಳ ಸ್ಥಳಾಂತರ ಮಾಡಲಾಗಿದೆ.

Minister C.C. Patil and relocation of tree
ಮರವನ್ನು ಸ್ಥಳಾಂತರಿಸುತ್ತಿರುವುದು ಮತ್ತು ಸಚಿವ ಸಿ.ಸಿ. ಪಾಟೀಲ್

By

Published : Jul 9, 2022, 3:31 PM IST

ಬೆಂಗಳೂರು : ರಸ್ತೆ, ಹೆದ್ದಾರಿಗಳ ಅಗಲೀಕರಣ ಸಂದರ್ಭ ಅಡ್ಡಿಯಾಗುವ ಮರಗಳನ್ನು ಕಡಿದು ಪರಿಸರ ನಾಶ ಮಾಡುವ ಬದಲು ಅವುಗಳನ್ನು ಸ್ಥಳಾಂತರಿಸಿ ಬೇರೆಡೆ ನೆಟ್ಟು ಬೆಳೆಸುವ ವೈಜ್ಞಾನಿಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಈಗಾಗಲೇ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಸೂಚಿಸಲಾಗಿತ್ತು.

ಅದರಂತೆ ಸುಮಾರು 1500ಕ್ಕೂ ಹೆಚ್ಚು ಗಿಡ ಮರಗಳನ್ನು ಬೇರೆಡೆ ಒಯ್ದು ನೆಡಲಾಗಿದೆ. ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ಇತರ ಕಡೆಗಳಲ್ಲೂ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್​ ತಿಳಿಸಿದ್ದಾರೆ.

ಮರಗಳನ್ನು ಸಂರಕ್ಷಿಸಿ ಪುನಶ್ಚೇತನಗೊಳಿಸಲು ಸೂಕ್ತ ಸಲಹೆಗಳನ್ನು ನಡಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ನೀಡಿದ ಸಲಹೆಯಂತೆ ಒಟ್ಟು 6 ರಸ್ತೆ ಮತ್ತು ಹೆದ್ದಾರಿ ಅಗಲೀಕರಣ ಯೋಜನೆಗಳಲ್ಲಿ 2100 ಮರಗಳನ್ನು ಗುರುತಿಸಿ ಬೇರೆಡೆಗೆ ಸ್ಥಳಾಂತರಿಸಿ, ನೆಟ್ಟು ಪೋಷಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಲ್ಲಿ 1500 ಮರಗಳನ್ನು ಸ್ಥಳಾಂತರಿಸಿದ್ದು, ಉಳಿದ ಮರಗಳನ್ನೂ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.

ಮರಗಳ ಸ್ಥಳಾಂತರಕ್ಕೆ ಆಯ್ಕೆ ಮಾಡಿದ ಹೆದ್ದಾರಿಗಳ ವಿವರ :ರಾಷ್ಟ್ರೀಯ ಹೆದ್ದಾರಿ - 4 ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟದಿಂದ ಆನೇಕಲ್ಲಿಗೆ ತೆರಳುವ ಹೆದ್ದಾರಿ, ಅತ್ತಿಬೆಲೆ ಮೂಲಕ ಆನೇಕಲ್ಲಿನಿಂದ ಕಾಟನಲ್ಲೂರ್ ಗೇಟ್ (ಎನ್.ಹೆಚ್.-4), ಹೀಗೆ ಒಟ್ಟು 155 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಮರಗಳ ಪುನಶ್ಚೇತನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಖ್ಯವಾಗಿ ಹೊಂಗೆ, ಗುಲ್ ಮೊಹರ್, ಸಿಸ್ಸೋ, ಅರಳಿ, ಬೇವು, ಬಸರಿ, ಅಕೇಷಿಯಾ, ನೀಲಗಿರಿ ಮುಂತಾದ ಮರಗಳನ್ನು ಸ್ಥಳಾಂತರಿಸಿ ಪೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಶಾಲೆ ಕಾಲೇಜು, ನ್ಯಾಯಾಲಯಗಳೂ ಸೇರಿದಂತೆ ಯಾವುದೇ ಕಟ್ಟಡ ನಿರ್ಮಿಸುವಾಗಲೂ ಸುತ್ತಮುತ್ತ ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸುವುದಕ್ಕೆ ಅವಕಾಶವಿಟ್ಟು ಅವುಗಳನ್ನು ಪೋಷಿಸಬೇಕು ಎಂದು ಈಗಾಗಲೇ ತಮ್ಮ ಇಲಾಖೆಯಲ್ಲಿ ಸುತ್ತೋಲೆ ಹೊರಡಿಸಿ ಆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.

ಹೆದ್ದಾರಿ ಪಕ್ಕದಿಂದ ತೋಪುಗಳಿಗೆ ಸ್ಥಳಾಂತರ:ಹೆದ್ದಾರಿಗಳ ಪಕ್ಕದಿಂದ ಈ ರೀತಿ ಸ್ಥಳಾಂತರಿಸಿದ ಗಿಡಮರಗಳನ್ನು ಬೆಂಗಳೂರು ಸುತ್ತಮುತ್ತಲಿರುವ ಗ್ರಾಮಗಳ ಮತ್ತು ಕೆರೆಕಟ್ಟೆಗಳ ಅಕ್ಕಪಕ್ಕದ ಅರಣ್ಯಗಳಲ್ಲಿ, ಕಿರುತೋಪುಗಳಲ್ಲಿ ನೆಡಲಾಗಿದೆ. ಮಂಡೂರು, ಹೊಸಕೋಟೆ ಕೆರೆ, ಬೆಟ್ಟಕೊಟ್ಟೆ ಅರಣ್ಯ, ಮೈಲನಹಳ್ಳಿ, ಹೆಸರುಘಟ್ಟ, ಸೊಣ್ಣೇನಹಳ್ಳಿ, ದಿಬ್ಬೂರು, ಕೃಷ್ಣದೊಡ್ಡಿ, ಹಾರಗದ್ದೆಕೆರೆ, ಗುಂಜೂರ್ ಕೆರೆ, ಈ ಮುಂತಾದ ಕಡೆಗಳಲ್ಲಿ ಬದಲಿ ವ್ಯವಸ್ಥೆಗೊಳಿಸಿ ನೆಟ್ಟು ಪೋಷಿಸಲಾಗುತ್ತಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ಶಿವಪ್ರಸಾದ್ ತಿಳಿಸಿದ್ದಾರೆ.

ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ವೈಜ್ಞಾನಿಕವಾಗಿ ಅವುಗಳ ಬೇರುಗಳನ್ನು ಸಂರಕ್ಷಿಸುವುದಲ್ಲದೇ, ಬ್ಯಾಕ್ಟೀರಿಯಾ ಅಥವಾ ಇನ್ನಿತರ ಅಪಾಯಕಾರಿ ಸೋಂಕುಗಳಿಗೆ ಈಡಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಣ್ಣು ಪರೀಕ್ಷೆಯ ವರದಿ ಪಡೆದು ಆಯಾ ಜಾತಿಯ ಗಿಡಮರಗಳಿಗೆ ಸ್ಥಳೀಯ ಪರಿಸರ ಹೊಂದಿಕೆಯಾಗುವಂತೆ ಈ ಯೋಜನೆ ಜಾರಿಗೊಳಿಸಲಾಗಿದೆ. ಮುಂದೆ ಈ ಗಿಡಮರಗಳಿಗೆ ನೀರು, ಗೊಬ್ಬರ ಕೊಟ್ಟು ಮೂರು ವರ್ಷಗಳವರೆಗೆ ಪೋಷಿಸಿ ರಕ್ಷಿಸಲು ಖಾಸಗಿ ಸಹಭಾಗಿತ್ವ ಪಡೆಯಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಗುಬ್ಬಿಗಳಿಗಾಗಿ ಮನೆ ನಿರ್ಮಾಣ : ಈ ಕುಟುಂಬದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ABOUT THE AUTHOR

...view details