ಬೆಂಗಳೂರು:ಕೊರೊನಾ ವೈರಸ್ ಕುರಿತು ಹೀಗೆ ಎಂದೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಕೆಲವರಿಗೆ ರೋಗ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದಿದೆ. ಹಾಗೆಯೇ ಲಕ್ಷಣಗಳು ಇದ್ದರೂ ನೆಗೆಟಿವ್ ಬಂದಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತಹ ಘಟನೆಗಳು ಹೆಚ್ಚು ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ನಲ್ಲಿ ನಡೆಯುವ ಸಾಧ್ಯತೆಗಳೇ ಹೆಚ್ಚು.
ಒಂದೊಮ್ಮೆ ನೆಗೆಟಿವ್ ಬಂದರೆ ಮುಂದೇನು? ಎಂಬ ಪ್ರಶ್ನೆ ಕಾಡುವುದು ಸಹಜ. ನೆಗೆಟಿವ್ ವರದಿ ಎಂದು ಸುಮ್ಮನೆ ಇರಬೇಕೇ? ಅಥವಾ ಸುಮ್ಮನೆ ಇದ್ದರೆ ಮುಂದಿನ ದಿನಗಳಲ್ಲಿ ದೇಹಕ್ಕೆ ಯಾವ ರೀತಿ ಸಮಸ್ಯೆ ಉಂಟಾಗಬಹುದು ಎಂಬುದರ ಕುರಿತು ತಜ್ಞರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಟಾಸ್ಕ್ಫೋರ್ಸ್ ತಂಡವು ಆ್ಯಂಟಿಜೆನ್ ಟೆಸ್ಟ್ ಮಾಡುವಂತೆ ಸಲಹೆ ನೀಡಿತು. ಸ್ವಾಬ್ ಟೆಸ್ಟ್ ಬಳಿಕ ಕೋವಿಡ್ ವರದಿಗಾಗಿ 2-3 ದಿನಗಳ ಕಾಲ ಕಾಯಬೇಕಿತ್ತು. ಆದರೆ, ಅದೇ ಸಮಯದಲ್ಲಿ ಸೋಂಕಿತರ ಸಂಖ್ಯೆಯೂ ದಿಢೀರ್ ಏರಿಕೆ ಕಂಡಿತು. ಹೀಗಾಗಿ, ಫಲಿತಾಂಶ ವೇಗಕ್ಕೆ ಹಾಗೂ ಬಹುಬೇಗ ಚಿಕಿತ್ಸೆಗೆ ಅಡ್ಡಿಯಾಗಿತ್ತು. ಇದರಿಂದ ಕೊರೊನಾ ಹರಡುವಿಕೆ ನಿಯಂತ್ರಿಸಲು ಪ್ರಾಥಮಿಕ ತಪಾಸಣೆಯಾಗಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಶುರು ಮಾಡಲಾಯಿತು.
ಬಹಳಷ್ಟು ತಜ್ಞರು, ರ್ಯಾಪಿಡ್ ಟೆಸ್ಟ್ನಲ್ಲಿ ನೆಗೆಟಿವ್ ಬಂದರೂ ಮುಂದಿನ ಭಾಗವಾಗಿ ಸ್ವಾಬ್ ಪರೀಕ್ಷೆ ಹಾಗೂ ಮತ್ತೊಂದು ಹೆಜ್ಜೆ ಮುಂದೊಗಿ ಸಿಟಿ ಸ್ಕ್ಯಾನಿಂಗ್ ಮಾಡಿಸುವಂತೆಯೇ ಸಲಹೆ ನೀಡಿದ್ದಾರೆ. ಆರ್ಟಿಪಿಎಸ್ ಹಾಗೂ ಆ್ಯಂಟಿಜೆನ್ನಲ್ಲಿ ಫಲಿತಾಂಶ ಎಲ್ಲರಿಗೂ ಶೇ.100ರಷ್ಟು ಸಿಗುವುದಿಲ್ಲ. ಹೀಗಾಗಿ, ರೋಗ ಲಕ್ಷಣಗಳಿದ್ದು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದರೆ ಸಿಟಿ ಸ್ಕ್ಯಾನ್ ಮಾಡಿಸಿದರೆ ಉತ್ತಮ.
ದೀರ್ಘಕಾಲದ ರೋಗ ಹಾಗೂ ಉಸಿರಾಟದ ತೊಂದರೆ, ಶ್ವಾಸಕೋಶದ ಸಮಸ್ಯೆಯಿಂದ ಬಳಲುವವರು ಈ ಪರೀಕ್ಷೆ ನಂತರವೂ ಸಿಟಿ ಸ್ಕ್ಯಾನ್ ಮಾಡಿಸಬೇಕಿದೆ. ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣ ಇರುವಾಗ ಸಿಟಿ ಸ್ಕ್ಯಾನ್ ಮಾಡಿಸಿದರೆ ಮುಂದೆ ತೀವ್ರತೆ ಹೆಚ್ಚಾಗುವ ಮುನ್ನವೇ ಚಿಕಿತ್ಸೆ ನೀಡಲು ಸಹಕಾರಯಾಗಲಿದೆ. ಇದರಿಂದಾಗಿ ಉಸಿರಾಟದ ತೊಂದರೆ ತಪ್ಪಿಸಬಹುದು.
ಆರೋಗ್ಯಾಧಿಕಾರಿ ಡಾ.ಜಿ.ಶ್ರೀನಿವಾಸ ಮಾಹಿತಿ ಕೊರೊನಾ ಲಕ್ಷಣಗಳಾದ ನೆಗಡಿ, ಗಂಟಲು ಕೆರೆತ, ವಾಂತಿ, ಜ್ವರ, ವಾಸನೆ ಹಾಗೂ ರುಚಿ ಗೊತ್ತಾಗದಿರುವುದು. ಇವಿದ್ದು ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದರೆ ಸಿಟಿ ಸ್ಕ್ಯಾನ್ ಒಳಗಾಗುವುದು ಒಳಿತು. ಈ ಮೂಲಕ ರೋಗ ಲಕ್ಷಣಗಳನ್ನು ಕಂಡು ಹಿಡಿದು, ಆರಂಭದಲ್ಲೇ ಚಿಕಿತ್ಸೆ ನೀಡಿ ತೀವ್ರತೆ ಹೆಚ್ಚಾಗಿ ಸಾವನ್ನಪ್ಪುವುದನ್ನು ತಪ್ಪಿಸಬಹುದು.
ಲ್ಯಾಬ್ ಡೇಟಾ:ಈವರೆಗೂ ರ್ಯಾಪಿಡ್ ಆ್ಯಂಟಿಜೆನ್ ಡಿಟೆಕ್ಷನ್ ಟೆಸ್ಟ್ ಮೂಲಕ 14,92,839 ಮಂದಿಗೆ ಮಾಡಲಾಗಿದೆ. ಆರ್ಟಿಪಿಸಿಆರ್ ಮತ್ತು ಬೇರೆ ವಿಧಾನದ ಮೂಲಕ 27,89,896 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ 42,82,735 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 5,26,876 ಪ್ರಕರಣಗಳು ದೃಢಪಟ್ಟಿವೆ.