ಬೆಂಗಳೂರು :ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಡ್ರಗ್ಸ್ ಜಾಲದ ಕಬಂಧಬಾಹು ವಿಸ್ತರಿಸುತ್ತಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದ್ರೆ ನಗರದಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಹಾಗೂ ಬಂಧಿತರಾದ ಡ್ರಗ್ಸ್ ಪೆಡ್ಲರ್ಗಳ ಸಂಖ್ಯೆ ದುಪ್ಪಟ್ಟಾಗಿದೆ.
ಮಾದಕದ್ರವ್ಯ ಜಾಲದಲ್ಲಿ ದಂಧೆಕೋರರು ಕಳೆದ ವರ್ಷ ಗಾಂಜಾವನ್ನು ಅತಿ ಹೆಚ್ಚು ಸರಬರಾಜು ಮಾಡುವ ಮೂಲಕ ಪಾರುಪಾತ್ಯ ಮೆರೆದಿದ್ದಾರೆ.
ಲಾಕ್ಡೌನ್ ನಡುವೆಯೂ ಈ ವರ್ಷ ಮಾದಕವಸ್ತು ನಿಯಂತ್ರಣ (ಎನ್ಡಿಪಿಎಸ್) ಕಾಯ್ದೆಯಡಿ 2,766 ಪ್ರಕರಣ ದಾಖಲಿಸಿಕೊಂಡು, 3,600 ಆರೋಪಿಗಳನ್ನು ಬಂಧಿಸಲಾಗಿದೆ.
ಡ್ರಗ್ಸ್ ಜಾಲ ಈ ಪಾಟಿ ಹೆಸರು ಮಾಡಿದ್ದು ಚಂದನವನದ ನಟಿಯರಿಂದ. ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಪಾರ್ಟಿ ಆಯೋಜಿಸುತ್ತಿದ್ದ ವಿರೇನ್ ಖನ್ನಾ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದು ಚಿತ್ರರಂಗಕ್ಕೆ ದೊಡ್ಡ ಕಪ್ಪುಚುಕ್ಕೆಯಾಯಿತು.
ಕೊರೊನಾ ಅವಧಿಯಲ್ಲೇ ಅಧಿಕ ಪ್ರಕರಣ :ಕೊರೊನಾ ವೈರಸ್ ಹರಡದಂತೆ ವಿಧಿಸಲಾಗಿದ್ದ ಲಾಕ್ಡೌನ್ನಲ್ಲೇ ಅಧಿಕ ಪ್ರಕರಣ ದಾಖಲಾಗಿವೆ. ಏಳೆಂಟು ತಿಂಗಳ ಕಾಲ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಆದರೆ, ಈ ಅವಧಿಯಲ್ಲೇ ಡ್ರಗ್ಸ್ ಪೆಡ್ಲರ್ಗಳು ಸಕ್ರಿಯವಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.