ಬೆಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಕೈಗೆಟಕುವ ದರದಲ್ಲಿ ದೊರಕಬೇಕೆನ್ನುವ ಉದ್ದೇಶದಿಂದ ಆರಂಭವಾದ ಪ್ರಧಾನಮಂತ್ರಿ ಜನರಿಕ್ ಔಷಧ ವಲಯ ಕೊರೊನಾ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ವರವಾಗಿದೆ. ಕೋವಿಡ್ನಿಂದಾಗಿ ಸಣ್ಣ ಪ್ರಮಾಣದಲ್ಲಿದ್ದ ಮೆಡಿಕಲ್ ಮಾಫಿಯಾ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದೇ ಅದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಕೊರೊನಾ ಸಂಕಷ್ಟದ ಸಂದರ್ಭ ಅನೇಕ ಕಡೆಗಳಲ್ಲಿ ಔಷಧ ಕೊರತೆ ಉಂಟಾಗಿ ವ್ಯವಹಾರ ಕುಸಿದಿದ್ದರೂ ಜನೌಷಧ ಮಳಿಗೆಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲೆರಡು ತಿಂಗಳಲ್ಲಿ ನೂರು ಕೋಟಿ ರೂ. ಮೊತ್ತದ ಔಷಧ ಮಾರಾಟವಾಗುವ ಮೂಲಕ ಮೊದಲಿದ್ದ ಗರಿಷ್ಠ ಮಾರಾಟವನ್ನು ದಾಖಲಿಸಿದೆ. ದೇಶಾದ್ಯಂತ ಪ್ರತಿ ತಿಂಗಳೂ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಈ ಕೇಂದ್ರಗಳ ಮೂಲಕ ಕೈಗೆಟಕುವ ದರದಲ್ಲಿ ಔಷಧ ಖರೀದಿಸುತ್ತಿದ್ದಾರೆ.
ಇದನ್ನೂ ಓದಿ...ಕೇಂದ್ರದ ಜಿಎಸ್ಟಿ ನಷ್ಟ ಪರಿಹಾರ: 7ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ಪ್ರಸ್ತುತ ದೇಶಾದ್ಯಂತ 6 ಸಾವಿರಕ್ಕೂ ಅಧಿಕ ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇನ್ನು ಕರ್ನಾಟಕದಲ್ಲೂ 200 ಜನೌಷಧ ಕೇಂದ್ರಗಳಿದ್ದು, ಔಷಧಗಳ ಮಾರಾಟದಲ್ಲಿ ಮೇಲುಗೈ ಸಾಧಿಸುತ್ತಿವೆ. ಈ ಮೊದಲು ಅನೇಕ ವೈದ್ಯರು ಜನರಿಕ್ ಔಷಧ ಬರೆದು ಕೊಡಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಕೊರೊನಾ ಆರಂಭದಲ್ಲಿ ನಡೆಸಿದ್ದ ಸಂವಾದದಲ್ಲಿ ಅಸಮಾಧಾನ ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಆದೇಶವೊಂದನ್ನು ಹೊರಡಿಸಿ ಇನ್ನುಮುಂದೆ ವೈದ್ಯರು ಜನರಿಕ್ ಔಷಧವನ್ನೇ ರೋಗಿಗಳಿಗೆ ಬರೆದುಕೊಡಬೇಕೆಂದು ತಿಳಿಸಿತ್ತು. ಇದಕ್ಕೆ ಹಲವು ವೈದ್ಯರು ಪೂರಕವಾಗಿ ಸ್ಪಂದಿಸಿದ್ದು ಕೂಡ ಜನೌಷಧ ಜನಪ್ರಿಯವಾಗಲು ಕಾರಣವಾಗಿದೆ.