ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ದೊಡ್ಡದಾದ ಗುಡುಗು ರೀತಿಯ ಭಾರೀ ಶಬ್ದವೊಂದು ಕೇಳಿ ಬಂದಿದ್ದು, ಏನಾಗಿರಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪರಿಶೀಲಿಸುತ್ತಿದೆ.
ರಾಜಧಾನಿಯಲ್ಲಿ ಕೇಳಿ ಬಂದ ನಿಗೂಢ ಶಬ್ದ ಇಂಟರ್ ನ್ಯಾಷನಲ್ ಏರ್ಪೋರ್ಟ್, ಕಲ್ಯಾಣ್ ನಗರ್, ಎಂಜಿ ರೋಡ್, ಮಾರತ್ ಹಳ್ಳಿ, ವೈಟ್ ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿಯಿಂದ ಹೆಬ್ಬಗೋಡಿವರೆಗೂ ದೊಡ್ಡದಾದ ಶಬ್ದ ಕೇಳಿ ಬಂದಿದೆ. ಜನರು ಭಯಭೀತರಾಗಿ ಹೊರಗೆ ಬಂದು ನೋಡಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಬೆಂಗಳೂರಿನಲ್ಲಿ ಯಾವುದೇ ರೀತಿಯ ಭೂಕಂಪನದ ಅನುಭವ ಆಗಿಲ್ಲ. ರಿಕ್ಟರ್ ಮಾಪಕದಲ್ಲಿ ಏನೂ ದಾಖಲಾಗಿಲ್ಲ. ಹೀಗಾಗಿ ಇದು ಭೂಕಂಪವಲ್ಲ. ನಮಗೆ ಹಲವು ದೂರವಾಣಿ ಕರೆಗಳು ಬರುತ್ತಿವೆ. ಆದರೆ ಏನಾಗಿದೆ ಅನ್ನೋದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಸಾಮಾನ್ಯವಾಗಿ ಬ್ಲಾಸ್ಟಿಂಗ್‌ನಲ್ಲಿ ಈ ಮಟ್ಟಿಗಿನ ಭಾರೀ ಶಬ್ದ ಬರಲ್ಲ. ಭಾರೀ ಶಬ್ದ ಬಂದಿರೋ ಹಿನ್ನೆಲೆ ಏನು ಅನ್ನೋದನ್ನ ಪತ್ತೆ ಹಚ್ಚಬೇಕು ಎಂದು ಹೇಳಿದ್ದಾರೆ.
ನಿಗೂಢ ಶಬ್ದ ಕುರಿತು ಟ್ವೀಟ್ ನಿಗೂಢ ಶಬ್ದದ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಎಲ್ಲೂ ಯಾವುದೇ ಹಾನಿ ಸಂಭವಿಸಿಲ್ಲ. ಸಮರ ವಿಮಾನಗಳು ‘ಸೂಪರ್ ಸಾನಿಕ್’ ವೇಗದಲ್ಲಿ ಹಾರಾಟ ನಡೆಸುವಾಗ ಕೇಳುವ ಶಬ್ದವೇ ಎಂಬುದನ್ನು ಪರಿಶೀಲಿಸಿ ಎಂದು ಏರ್ಫೋರ್ಸ್ ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದೇವೆ ಎಂದಿದ್ದಾರೆ.