ಬೆಂಗಳೂರು: ಪ್ರೀತಿಸಿದ ಹುಡುಗಿಗೆ ಖರ್ಚು ಮಾಡಲು ಹಾಗೂ ಶೋಕಿ ಜೀವನ ನಡೆಸಲು ಪರಿಚಯಸ್ಥರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ ಅಗ್ರಹಾರ ನಿವಾಸಿ ನವೀನ್ ಕುಮಾರ್ ಬಂಧಿತ ಆರೋಪಿ. ಈತ ಜಯನಗರದ ಕೆಫೆ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದ.
ಕಳ್ಳತನವಾಗಿದ್ದ ಮನೆ ಮಾಲೀಕ ಶಿವಶಂಕರಯ್ಯ ಪತ್ನಿ ಹಾಗೂ ಆರೋಪಿ ನವೀನ್ ಕುಮಾರ್ ತಾಯಿ ಪರಸ್ಪರ ಪರಿಚಯಸ್ಥರಾಗಿದ್ದರು. ಇಬ್ಬರ ಮನೆ ಒಂದೇ ಏರಿಯಾದಲ್ಲಿ ಆಗಿದ್ದರಿಂದ ಆಗಾಗ ಶಿವಶಂಕರಯ್ಯ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಮಾರ್ಚ್ 11 ರಂದು ಶಿವಶಂಕರಯ್ಯ ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯಲ್ಲಿದ್ದ 109 ಗ್ರಾಂ ಚಿನ್ನಾಭರಣ ಕದ್ದಿದ್ದಾನೆ. ಈತ ಕದ್ದಿರುವುದು ಮನೆಯವರಿಗೂ ಗೊತ್ತಾಗಿರಲಿಲ್ಲ. ಇತ್ತೀಚೆಗೆ ಯುಗಾದಿ ಹಬ್ಬ ಹಿನ್ನೆಲೆ ಒಡವೆ ಹಾಕಿಕೊಳ್ಳಲು ನೋಡಿದಾಗ ಕಾಣೆಯಾಗಿರುವುದು ಗೊತ್ತಾಗಿದೆ.