ಬೆಂಗಳೂರು :ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇಗೌಡ ಅವರ ಅಭಿಮಾನಿ ಎಂದು ಬೈಕ್ ಮೇಲೆ ಹೆಸರು ಹಾಗೂ ಪ್ರೆಸ್ ಅಂತಾ ಮುದ್ರಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ಜಯನಗರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಿದ್ದಾರೆ.
ತ್ಯಾಗರಾಜ ನಗರದ ನಿವಾಸಿ ಪಿ.ಗಿರೀಶ್ ಬಾಬು (58) ಎಂಬುವರ ಬೈಕ್ ಜಪ್ತಿ ಮಾಡಲಾಗಿದೆ. ಈತ ಈವರೆಗೂ 42 ಸಂಚಾರ ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ. 20,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಗಿರೀಶ್ ಬಾಬು ತಾನು ಆರ್‌ಟಿಐ ಕಾರ್ಯಕರ್ತ ಎಂದು ಘೋಷಿಸಿಕೊಂಡಿದ್ದ. ಕೆಲ ಅಧಿಕಾರಿಗಳ ವಿರುದ್ಧ ದೂರು ನೀಡುವುದು ಹಾಗೂ ಸಾರ್ವಜನಿಕರಲ್ಲಿ ಪ್ರಭಾವ ಬೀರಲು ತನ್ನ ಬೈಕ್‍ನ ನಂಬರ್ ಪ್ಲೇಟ್ ಮೇಲೆ ರವಿಕಾಂತೇಗೌಡರ ಹೆಸರು ಮತ್ತು ಪ್ರೆಸ್ ಎಂದು ಮುದ್ರಿಸಿಕೊಂಡು ಓಡಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು.