ಬೆಂಗಳೂರು: ಬಿಬಿಎಂಪಿ ಕೋಟ್ಯಂತರ ರೂ. ಪ್ರತಿ ವರ್ಷ ವೆಚ್ಚಮಾಡಿದರೂ, ಮಳೆ ಬಂದಾಗ ಯಮಸ್ವರೂಪಿ ಗುಂಡಿಗಳು ಬಾಯ್ತೆರೆಯುತ್ತಿವೆ. ಇನ್ನೆಷ್ಟೋ ಕಡೆ ಡಾಂಬರ್ ರಸ್ತೆಗಳೇ ಮಾಯವಾಗಿ ಕೇವಲ ಜಲ್ಲಿಕಲ್ಲು, ಧೂಳಿನಿಂದ ತುಂಬಿಹೋಗಿವೆ. ಜನರು, ವಿವಿಧ ಸಂಘಟನೆಗಳು ರಸ್ತೆಗುಂಡಿ ಸರಿಪಡಿಸಿ ಎಂದು ಸರ್ಕಾರವನ್ನು ಟೀಕಿಸಿದ್ದಾರೆ. ವ್ಯಂಗ್ಯರೂಪದಲ್ಲಿ ನವರಾತ್ರಿ ಸಮಯದಲ್ಲಿ ರಸ್ತೆಗುಂಡಿ ಪೂಜೆಯನ್ನೂ ಆಪ್ ಪಕ್ಷ ಹಾಗೂ ಹಲವಾರು ಸಂಘಟನೆಗಳೂ ಮಾಡಿವೆ. ಆದರೂ ಹದಗೆಟ್ಟ ರಸ್ತೆ ಸ್ಥಿತಿ ಬದಲಾಗಿಲ್ಲ.
ಸಿಎಂ ತಾತಾ ರಸ್ತೆ ಸರಿಮಾಡ್ಸಿ ಪ್ಲೀಸ್: ಬಾಲಕಿ ಇದೀಗ ಎರಡನೇ ತರಗತಿ ಓದುತ್ತಿರುವ ಎಲ್. ಧವನಿ ಎಂಬ ಬಾಲಕಿ 1.13 ನಿಮಿಷಗಳ ವಿಡಿಯೋ ಮಾಡಿ ''ಸಿಎಂ ತಾತ ನಮ್ಮ ಬೆಂಗಳೂರಲ್ಲಿ ರಸ್ತೆಗಳೇ ಸರಿಯಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಅದರಿಂದ ಸುಮಾರು ಜನ ಸತ್ತೋಗ್ತಾ ಇದ್ದಾರೆ. ಅವರು ಸತ್ತರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ, ನೀವೇ ಹೇಳಿ ತಾತ. ನಾನು ಕೂಡಾ ಹೊರಗಡೆ ಹೋಗಿರುವ ನಮ್ಮ ಅಪ್ಪ ಎಷ್ಟೊತ್ತಿಗೆ ಬರ್ತಾರೋ ಅಂತಾ ಕಾಯ್ತಾ ಇರ್ತೀನಿ. ಆ ಗುಂಡಿಗಳನ್ನ ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ. ನಂಗೆ ಚಾಕೋಲೇಟ್ ತಗೋ ಅಂತಾ ನಮ್ಮ ಅಪ್ಪ - ಅಮ್ಮ ಕೊಟ್ಟಿರೂ ಪಾಕೆಟ್ ಮನಿಯನ್ನು ಕೂಡ ಕೊಡುವೆ. ಪ್ಲೀಸ್ ತಾತ ಆ ಗುಂಡಿಗಳನ್ನು ಮುಚ್ಚಿಸಿ'' ಎಂದು ಮನವಿ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಸರ್ಕಾರ ಇದಕ್ಕಾದರೂ ಸ್ಪಂದಿಸುತ್ತಾ, ರಸ್ತೆಗಳ ಸ್ಥಿತಿ ಉತ್ತಮವಾಗುತ್ತಾ ಎಂಬ ಕುತೂಹಲ ಮೂಡಿದೆ.
ನಗರದ ಹೆಗ್ಗನಹಳ್ಳಿ ನಿವಾಸಿಯಾದ ಧವನಿ, ಒಂದು ವರ್ಷಗಳ ಹಿಂದೆ ಅಪ್ಪ-ಅಮ್ಮನ ಜೊತೆ ರಸ್ತೆ ಗುಂಡಿಯಿಂದಾಗಿ ಬಿದ್ದು ಏಟು ಮಾಡಿಕೊಂಡಿದ್ದಳು. ಧವನಿಗೆ ಡಿಹೈಡ್ರೆಡ್ ಸಮಸ್ಯೆ ಇದ್ದು, ಹೀಗಾಗಿ ನೀರು ಹೆಚ್ಚು ಕುಡಿಯುವಂತೆ ಪೋಷಕರ ಒತ್ತಾಯಿಸಿ, ಇದಕ್ಕೆ ಒಂದು ಗ್ಲಾಸ್ ನೀರು ಕುಡಿದರೆ ಒಂದು ರೂಪಾಯಿ ನೀಡುವುದಾಗಿ ಪೋಷಕರು ಹೇಳಿದ್ದರು.
ಅಂತೆಯೇ ದಿನಕ್ಕೆ 5-6 ಲೀಟರ್ ನೀರು ಕುಡಿಯಲು ಶುರು ಮಾಡಿದ್ದ ಧವನಿ, ಇದರಿಂದಲೇ ಅಂದಾಜು 700 ರೂಪಾಯಿ ಕೂಡಿಟ್ಟಿದ್ದಳು. ಈ ಹಣವನ್ನು ರಸ್ತೆ ಗುಂಡಿ ಮುಚ್ಚಲು ಸಿಎಂಗೆ ನೀಡಲು ನಿರ್ಧರಿಸಿ ವಿಡಿಯೋ ಮಾಡಿದ್ದಾಳೆ. ಇದಕ್ಕೆ ಸಿಎಂ ಕೊಡುವ ಪ್ರತಿಕ್ರಿಯೆ ಬಗ್ಗೆ ಎಲ್ಲರೂ ಕುತೂಹಲ ಹೊಂದಿದ್ದಾರೆ.