ಬೆಂಗಳೂರು: ಪದ್ಮನಾಭನಗರದಲ್ಲಿ ನಡೆದ ಜಾನಪದ ಉತ್ಸವ ಅರ್ಥಪೂರ್ಣವಾಗಿ ನಡೆದಿದ್ದು, ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ. ಹಾಗಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪದ್ಮನಾಭನಗರ ಜಾನಪದ ಉತ್ಸವ-2022ರ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ, ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯ ಮುತ್ಸದ್ಧಿ ಬಿ. ಎಸ್.ಯಡಿಯೂರಪ್ಪ ಅವರ ದಿಟ್ಟ ಕ್ರಮದಿಂದ ಕೋವಿಡ್ ಅನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾನಪದ ಉತ್ಸವವನ್ನು ಎರಡು ವರ್ಷಗಳ ನಂತರ ಹಮ್ಮಿಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಜಾನಪದಕ್ಕೆ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಬೆಂಗಳೂರಿನ ಸುಶಿಕ್ಷಿತ ಜನರಿರುವ ಪದ್ಮನಾಭನಗರ ಕ್ಷೇತ್ರದಲ್ಲಿ ಜಾನಪದ ಜಾತ್ರೆಗೆ ದೊಡ್ಡ ಸಂಖ್ಯೆಯಲ್ಲಿ ಜನ ಬಂದಿರುವುದು ಕನ್ನಡ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿ ಎಂದು ಸಿಎಂ ಹೇಳಿದರು.
ಜಾನಪದ ಉತ್ಸವ-2022ರ ಸಮಾರೋಪ ಕಾರ್ಯಕ್ರಮ ಭಾರತದಲ್ಲಿ ಕನ್ನಡಕ್ಕೆ ಅಗ್ರಮಾನ್ಯ ಸ್ಥಾನವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಭಾರತದಲ್ಲಿ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಹಲವಾರು ಯುಗಗಳು ಕಳೆದರೂ ಕೂಡ ಕನ್ನಡ ಗಟ್ಟಿಯಾಗಿ ನಿಂತಿದೆ. ಇದರ ಬಗ್ಗೆ ಯಾರಿಗೂ ಅನುಮಾನ ಬೇಡ. ಕನ್ನಡ ಭಾಷೆಯ ಶಕ್ತಿ ಜಾನಪದದಿಂದ ಬರುತ್ತದೆ. ಜನರ ಭಾಷೆಯ ಅಭಿವ್ಯಕ್ತಿ ಜಾನಪದ. ಹೃದಯದಿಂದ ಬರುವ ನುಡಿಗಳು ಜಾನಪದ. ದಕ್ಷಿಣದ ಮಾದೇಶ್ವರ, ಉತ್ತರದ ಶಿಶುನಾಳ ಶರೀಫರ ಶ್ರೀಮಂತಿಕೆ ಒಗ್ಗೂಡಿ ಇಂದು ಸಮ್ಮಿಲನವಾಗಿದೆ ಎಂದರು.
ಜಾನಪದ ಉತ್ಸವ-2022ರ ಸಮಾರೋಪ ಕಾರ್ಯಕ್ರಮ ಜಾನಪದ ಮತ್ತು ಕನ್ನಡ ವಿವಿಗಳನ್ನು ಉಳಿಸಬೇಕು: ಇಡೀ ವಿಶ್ವದಲ್ಲಿ ಜಾನಪದ ವಿಶ್ವವಿದ್ಯಾಲಯ ಇರುವುದು ಹಾವೇರಿಯ ಶಿಗ್ಗಾಂವಿಯಲ್ಲಿ ಮಾತ್ರ. ಅದನ್ನು ಬಿ.ಎಸ್.ಯಡಿಯೂರಪ್ಪನವರು ಕೊಡುಗೆಯಾಗಿ ನೀಡಿದ್ದಾರೆ. ಇಂದು ಜಾನಪದವನ್ನು ಉಳಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಹಾಗೂ ಹಾವೇರಿಯ ಜಾನಪದ ವಿಶ್ವವಿದ್ಯಾಲಯವನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕು. ಇವುಗಳನ್ನು ಉಳಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಕನ್ನಡದ ಮಹತ್ವ ತಿಳಿಯುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಜಾನಪದವನ್ನು ಶ್ರೀಮಂತಗೊಳಿಸಲು ಪ್ರಯತ್ನ: ನಾಗರೀಕತೆಯೇ ಸಂಸ್ಕೃತಿಯಲ್ಲ. ನಾವೇನಾಗಿದ್ದೇವೆಯೋ ಅದು ಸಂಸ್ಕೃತಿ. ಬೆಂಗಳೂರಿನಲ್ಲಿ ಜಾನಪದಕ್ಕೆ ಇಷ್ಟು ದೊಡ್ಡ ಪ್ರೋತ್ಸಾಹ ಸಿಕ್ಕಿರುವುದು ಸಂತಸದ ಸಂಗತಿ. ಆನ್ಯರಿಗೆ ನಮ್ಮತನ, ನಮ್ಮ ಭಾಷೆ ಸಂಸ್ಕೃತಿಯ ಬಗ್ಗೆ ಸದಾಕಾಲ ಅಭಿಮಾನವಿದ್ದಾಗ ಮಾತ್ರ ಕನ್ನಡ ನಾಡಿನ ಭವಿಷ್ಯ ಉಜ್ವಲವಾಗುತ್ತದೆ. ಇದನ್ನು ಎಲ್ಲಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವ ಪ್ರಯತ್ನ ಮಾಡಲಾಗುವುದು. ಯಾವುದೇ ಸಂದರ್ಭದಲ್ಲಿಯೂ ಜಾನಪದ ಕ್ಷೀಣಿಸಲು ಬಿಡುವುದಿಲ್ಲ. ಜಾನಪದವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ "ಪದ್ಮನಾಭನಗರ ಜನತೆ, ಕಾರ್ಯಕರ್ತರ ಶ್ರಮವನ್ನು ಕೊಂಡಾಡಿದರು. ಜಾನಪದ ಜಾತ್ರೆ ಪ್ರತಿ ವರ್ಷ ನಡೆಸುತ್ತೇನೆ. ಇಷ್ಟೊಂದು ಜನ ಸೇರಿದ್ದು ಸಂತಸ ನೀಡಿದೆ. ರಾಮ ರಥ ಯಾತ್ರೆಯಲ್ಲಿ ಪಾಲ್ಗೊಂಡು, ಪುನಃ ಸಂಜೆ ಸಾವಿರಾರು ಜನ ಸೇರಿದ್ದು ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ" ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಮುಗಿಯುವ ತನಕ ನೋಡಿ ಸಂತಸಪಟ್ಟರು.
ಜಾನಪದ ಜಾತ್ರೆಗೆ ಅದ್ಧೂರಿ ಸಮಾರೋಪ: ಸಂಜೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕರ್ನಾಟಕದ ಜನಪದ ಲೋಕವೇ ಇಳಿದು ಬಂತು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಕಲಾವಿದರು ವಿಶೇಷ ಪ್ರದರ್ಶನ ನೀಡಿದರು. ಮಲೆಮಹದೇಶ್ವರ ಹಾಡುಗಳು, ಮೈಸೂರಿನ ಚಂಡಿ ನಗಾರಿ, ಕೊಳ್ಳೆಗಾಲದ ನೀಲಗಾರರ ಪದ, ಸೋಲಿಗರ ಹಾಡು, ಮಂಗಳೂರಿನ ಕೋಲಾಟ, ವೀರಗಾಸೆ, ಜಗ್ಗಲಿಗೆ ಕುಣಿತ ಮುಂತಾದವು ಪ್ರದರ್ಶನ ಕಂಡವು. ರಾಜ್ಯದ ವಿವಿಧ ಭಾಗಗಳ ಜಾನಪದ ಗಾಯಕರಿಂದ ವಿಶೇಷ ಗಾಯನ ಕಾರ್ಯಕ್ರಮ ಸಹ ಇತ್ತು. ಗುರುರಾಜ ಹೊಸಕೋಟೆ ಅವರ ಕಲಿತ್ತ ಹುಡುಗಿ ಹಾಡು ಜನರನ್ನು ಹುಚ್ಚೆಬ್ಬಿಸಿ ಕುಣಿದು ಕುಪ್ಪಳಿಸುವಂತೆ ಮಾಡಿತು. ರಾಜ್ಯದ 17 ಜಾನಪದ ಕಲಾ ತಂಡಗಳ ಸುಮಾರು 400 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಕಡೆಯಲ್ಲಿ 300 ಕಲಾವಿದರು ಏಕಕಾಲದಲ್ಲಿ ವಿಶೇಷ ಸಂಯೋಜನೆಯಲ್ಲಿ ನೃತ್ಯ ಮಾಡುವ ಸೊಬಗನ್ನು ಸಾರ್ವಜನಿಕರು ಕಣ್ತುಂಬಿಸಿಕೊಳ್ಳುವಂತೆ ಮಾಡಿತು.
ಜನರಲ್ ಬಿಪಿನ್ ರಾವತ್ ಪಾರ್ಕ್ ಉದ್ಘಾಟನೆ ಜನರಲ್ ಬಿಪಿನ್ ರಾವತ್ ಪಾರ್ಕ್ ಉದ್ಘಾಟನೆ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರ ಜನರಲ್ ಬಿಪಿನ್ ರಾವತ್ ನೆನಪಿಗಾಗಿ ನಿರ್ಮಿಸಿದ ಉದ್ಯಾನವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಸಚಿವ ಆರ್. ಅಶೋಕ್ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಂ ಕೃಷ್ಣಪ್ಪ, ಸತೀಶ್ ರೆಡ್ಡಿ ಹಾಗೂ ಮುಖ್ಯ ಆಡಳಿತಗಾರ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ:ಜೆಎನ್ಯುನಲ್ಲಿ ಮಾಂಸಾಹಾರ ವಿಚಾರವಾಗಿ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ; 60 ಮಂದಿಗೆ ಗಾಯ!