ಬೆಂಗಳೂರು:ರಾಜಧಾನಿಯ ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ. ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್ ಕೆಟ್ಟು ಅದರಲ್ಲಿ ಸಿಲುಕಿದ್ದ ದಂಪತಿಗಳು ಮತ್ತು ಮಗುವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿರುವ ಸಂಗತಿ ತಿಳಿದು ಬಂದಿದೆ.
ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಪ್ಪಿದ ಭಾರಿ ದುರಂತ - ಲಿಫ್‌ಟ್‌ನಲ್ಲಿ ಸಿಲುಕಿಕೊಂಡ ಕುಟುಂಬ,
ವಾಜಪೇಯಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಭವಿಸಬೇಕಾಗಿದ್ದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಶಿವಾಜಿನಗರ ನಿವಾಸಿ ಮೊಹಮ್ಮದ್ ರಫಿ, ಅಸ್ಮಾ ಪುತ್ರ ಮೊಹಮ್ಮದ್ ತಾಜೀನ್ ರನ್ನು ರಕ್ಷಿಸಲಾಗಿದೆ. ಮೊಹಮ್ಮದ್ ರಫಿ ಕುಟುಂಬ ಸಮೇತ ಮೆಡಿಕಲ್ ಕಾಲೇಜಿಗೆ ತಮ್ಮ ಆರೋಗ್ಯ ಸಂಬಂಧಿತವಾಗಿ ಆಸ್ಪತ್ರೆಗೆ ಆಗಮಿಸಿದ್ದರು. ಶನಿವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲಿಫ್ಟ್ ಹತ್ತಿದ್ದು, ಎರಡನೇ ಮಹಡಿಗೆ ಹೋಗುವ ವೇಳೆಗೆ ಲಿಫ್ಟ್ ಕೆಟ್ಟು ನಿಂತಿದೆ. ಸುಮಾರು ಒಂದು ಗಂಟೆಯ ಕಾಲ ಲಿಫ್‌ಟ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಗಾಬರಿಕೊಂಡ ರಫಿ ಕೂಡಲೇ ಟೋಲ್‌ಫ್ರೀ ನಂಬರ್‌ಗೆ ಕರೆ ಮಾಡಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ದಕ್ಷಿಣ ವಿಭಾಗದ ಅಗ್ನಿಶಾಮಕ ದಳದ ಮುಖ್ಯಸ್ಥ ಹೇಮಂತ್ ಕುಮಾರ್ ನೇತೃತ್ವದ ತಂಡ ಸುಮಾರು 40 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಪ್ರಾಥಮಿಕವಾಗಿ ಘಟನೆಗೆ ತಾಂತ್ರಿಕ ಕಾರಣ ಎಂದು ತಿಳಿದು ಬಂದಿದೆ. ಸ್ಪಷ್ಟ ಕಾರಣದ ಬಗ್ಗೆ ತನಿಖೆ ನಡೆಸಲು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.