ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೆಮ್ಮೆಯ ವಿಶ್ವ ವಿಖ್ಯಾತ ಐತಿಹಾಸಿಕ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗದ ಪ್ರಮುಖ ಆಕರ್ಷಣೆಯೇ ಹೂವಿನ ಕರಗ ಹೊತ್ತ ಪೂಜಾರಿ ರಾಜ ಬೀದಿಗಳಲ್ಲಿ ವೀರಕುಮಾರರೊಂದಿಗೆ ಸಂಚಾರ ಮಾಡುವುದು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಸರಳವಾಗಿ ದೇವಸ್ಥಾನದೊಳಗೆ ಎಲ್ಲ ಕಾರ್ಯಗಳು ನಡೆದಿತ್ತು.
ಅದ್ದೂರಿಯಾಗಿ ಇಡೀ ತಿಗಳರ ಸಮುದಾಯ ಮಾತ್ರವಲ್ಲದೇ ದೇಶ-ವಿದೇಶದಿಂದಲ್ಲೂ ಭಾಗಿಯಾಗಿ ಜಾತ್ರೆಯಂತೆ ಆಚರಿಸುತ್ತಿದ್ದ ಸಂಭ್ರಮಕ್ಕೆ ಕೊರೊನಾ ಬ್ರೇಕ್ ಹಾಕಿತ್ತು. ಸದ್ಯ ಮೂರನೇ ಅಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆ ಆಗುತ್ತಿರುವ ದೃಷ್ಟಿಯಿಂದ ಬೆಂಗಳೂರು ಕರಗ ಮಹೋತ್ಸವವನ್ನ ಸಾರ್ವಜನಿಕವಾಗಿ ನಡೆಸಲು ಪಾಲಿಕೆ ಅನುಮತಿ ಕೊಟ್ಟಿದೆ.
ವಿಶ್ವವಿಖ್ಯಾತ ಕರಗ ಮಹೋತ್ಸವವೂ 8 ದಿನಗಳ ಉತ್ಸವವಾಗಿದ್ದು, ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇಂದು ರಾತ್ರಿ 12 ಗಂಟೆಗೆ ಕರಗ ಶಕ್ತ್ಯೋತ್ಸವ ನಡೆಯಲಿದೆ.