ಬೆಂಗಳೂರು:ಕೊರೊನಾ ವೈರಸ್ ನಗರದ ಹೊಂಗಸಂದ್ರದಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರನ್ನು ಶೋಚನೀಯ ಸ್ಥಿತಿಗೆ ತಳ್ಳಿದೆ. ಒಟ್ಟು 220 ವಲಸೆ ಕಾರ್ಮಿಕರಲ್ಲಿ ಒಬ್ಬನಿಂದ 35 ಮಂದಿಗೆ ಕೊರೊನಾ ಹರಡಿತ್ತು. ಇಂದು ಕೂಡಾ ಐವರಿಗೆ ಕೊರೊನಾ ದೃಢಪಟ್ಟಿದೆ.
ಈ ವಲಸೆ ಕಾರ್ಮಿಕರೆಲ್ಲರೂ ಕ್ವಾರಂಟೈನ್ನಲ್ಲಿದ್ದ ಕಾರಣ ಬಿಬಿಎಂಪಿ ಅಧಿಕಾರಿಗಳಿಗೆ, ಇವರ ಸಂಪರ್ಕಿತರನ್ನು ಹುಡುಕುವ ತಲೆಬಿಸಿ ತಪ್ಪಿದೆ. ಒಟ್ಟು 191 ಮಂದಿಗೆ ಒಟ್ಟಾಗಿ ತಪಾಸಣೆ ನಡೆಸಿದ ಕಾರಣದಿಂದ ಐವರಲ್ಲಿ ಸೋಂಕು ದೃಢಪಟ್ಟಿದೆ. ಉಳಿದವರೆಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಐವರು ಡಿಸ್ಚಾರ್ಜ್ ಆಗಿದ್ದು, ಈಗ 191 ಮಂದಿ ತಮ್ಮ ತವರೂರಿಗೆ ಹೊರಡಲು ಸಿದ್ಧರಾಗಿದ್ದಾರೆ. ರೈಲು ವ್ಯವಸ್ಥೆ ಆದ ಕೂಡಲೇ ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಉಳಿದೆಡೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬೊಮ್ಮನಹಳ್ಳಿ ವಲಯದ ಆರೋಗ್ಯ ಅಧಿಕಾರಿ ಡಾ. ಸುರೇಶ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಕೊರೊನಾದಿಂದ ಬಚಾವಾಗಿರೋ ಎಲ್ಲರಿಗೂ ನಗರದ ಸಹವಾಸ ಬೇಡ ಎಂಬಂತಾಗಿದೆ. ಕೆಲಸವಿಲ್ಲದಿದ್ದರೂ ಪರವಾಗಿಲ್ಲ, ನಮ್ಮನ್ನ ಊರಿಗೆ ಕಳುಹಿಸಿಕೊಡಿ ಎಂದು ವಲಸೆ ಕಾರ್ಮಿಕರು ಆರೋಗ್ಯಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.