ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಬಹುತೇಕ ಜಿಲ್ಲೆಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಇದರಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.
ರಾಜ್ಯದ ಪ್ರಮುಖ ಜಲಾಶಯಗಳ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ
ಕೆಆರ್ಎಸ್ (ಕಾವೇರಿ): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (ಕೃಷ್ಣರಾಜಸಾಗರ) ಜಲಾಶಯವನ್ನು1938ರಲ್ಲಿ ನಿರ್ಮಾಣ ಮಾಡಲಾಯಿತು. ಇದರ ಎತ್ತರ 42.67 ಮೀ., ಉದ್ದ 2,620 ಮೀ., ಪೂರ್ಣಮಟ್ಟ 124.80 ಅಡಿ, 49.50 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್ಎಸ್ ಜಲಾಶಯದಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದರ ಜೊತೆಗೆ ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೂ ಅನುಕೂಲವಾಗಿದೆ.
ಕಬಿನಿ:ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನಲ್ಲಿರುವ ಕಬಿನಿ/ಕಪಿಲಾ (ಕಾವೇರಿ ಉಪನದಿ) ಜಲಾಶಯದ ಎತ್ತರ 166 ಅಡಿ. ಇದು 12,927 ಅಡಿ ಉದ್ದವಿದ್ದು, ಪೂರ್ಣಮಟ್ಟ 2,284 ಅಡಿ. ಕಬಿನಿ 19.50 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇದು 1974ರಲ್ಲಿ ನಿರ್ಮಾಣವಾಗಿದ್ದು, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಉಪಯೋಗವಾಗಿದೆ.
ಹೇಮಾವತಿ:ಹಾಸನ ಜಿಲ್ಲೆಯ ಗೊರೂರಿನಲ್ಲಿ ಹೇಮಾವತಿ ನದಿಯಿದ್ದು, ಎತ್ತರ 44.5 ಮೀ., ಉದ್ದ 4,692 ಮೀ., ಪೂರ್ಣಮಟ್ಟ 2,922 ಅಡಿ ಇದೆ. ಇದರ ನೀರು ಸಂಗ್ರಹದ ಸಾಮರ್ಥ್ಯ 37.103 ಟಿಎಂಸಿ. ಇದು 1979ರಲ್ಲಿ ನಿರ್ಮಾಣವಾಗಿದ್ದು ಹಾಸನ, ಮೈಸೂರು, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿದೆ.
ಲಿಂಗನಮಕ್ಕಿ (ಶರಾವತಿ):ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯ 1964ರಲ್ಲಿ ನಿರ್ಮಾಣವಾಗಿದ್ದು, ಇದರ ಎತ್ತರ 192 ಅಡಿ, ಉದ್ದ 2,749.29 ಮೀ., ಪೂರ್ಣಮಟ್ಟ 1,819.00 ಅಡಿಯಿದೆ. ಇದು 151.75 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.
ಭದ್ರಾ:ಇದುಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿದೆ. ಜಲಾಶಯದ ಎತ್ತರ 59.13 ಮೀ., ಉದ್ದ 1,708 ಮೀ., ಪೂರ್ಣಮಟ್ಟ 186.00 ಅಡಿ ಇದೆ. ಇದು 71 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇದನ್ನು1965ರಲ್ಲಿ ನಿರ್ಮಾಣ ಮಾಡಲಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ, ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಿದೆ.
ಆಲಮಟ್ಟಿ:ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಆಲಮಟ್ಟಿ ಜಲಾಶಯ 2005ರ ಜುಲೈನಲ್ಲಿ ನಿರ್ಮಾಣವಾಯಿತು. ಕೃಷ್ಣ ನದಿಯಿಂದ ನೀರು ಆಲಮಟ್ಟಿಗೆ ಬರುತ್ತದೆ. ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆ ಈ ಜಲಾಶಯವನ್ನು ನಿರ್ಮಾಣ ಮಾಡಲಾಯಿತು. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಇದರ ಉಪಯೋಗವಾಗುತ್ತಿದೆ. ಇದರ ಎತ್ತರ 52.05 ಮೀ., ಉದ್ದ 1,565.15 ಮೀ., ಪೂರ್ಣ ಮಟ್ಟ 519.1ಮೀ., ಇದೆ. ಇದು 123 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ನಾರಾಯಣಪುರ ಜಲಾಶಯ: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರ ಜಲಾಶಯದ ಎತ್ತರ 29.72 ಮೀ., ಉದ್ದ 10,637 ಮೀ., ಪೂರ್ಣ ಮಟ್ಟ 492.23 ಮೀ., ಇದೆ. ಇದು 33.33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಈ ಜಲಾಶಯವನ್ನ 1982ರಲ್ಲಿ ಕುಡಿಯುವ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ಗಾಗಿ ನಿರ್ಮಾಣ ಮಾಡಲಾಯಿತು. ಯಾದಗಿರಿ, ವಿಜಯಪುರ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಿಗೆ ಇದರ ಉಪಯೋಗವಾಗುತ್ತಿದೆ.
ತುಂಗಭದ್ರಾ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯದ ಎತ್ತರ 49.50 ಮೀ., ಉದ್ದ 2,449 ಮೀ., ಪೂರ್ಣಮಟ್ಟ 1,633.00 ಅಡಿ ಹೊಂದಿದೆ. ನೀರಿನ ಸಾಮರ್ಥ್ಯ 133 ಟಿಎಂಸಿ ಇದೆ. ಕೊಪ್ಪಳ, ಬಳ್ಳಾರಿ, ರಾಯಚೂರು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಜಿಲ್ಲೆಗಳಿಗೆ ಇದರ ನೀರು ಬಳಕೆಯಾಗುತ್ತಿದೆ. ಇದು 1953ರಲ್ಲಿ ನಿರ್ಮಾಣವಾಗಿದ್ದು, ಕುಡಿಯುವ ನೀರು, ವಿದ್ಯುತ್, ನೀರಾವರಿ ಹಾಗೂ ಕೈಗಾರಿಕೆಗೆ ಅನುಕೂಲವಾಗಿದೆ. ಇದು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಜಂಟಿ ಪಾಲುದಾರಿಕೆಯಲ್ಲಿ ನಿರ್ಮಾಣವಾಗಿದೆ.
ವಾಣಿ ವಿಲಾಸ:ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಯಲ್ಲಿರುವ ವಾಣಿ ವಿಲಾಸ ಜಲಾಶಯದ ಎತ್ತರ 43.28 ಮೀ., ಉದ್ದ 405.50 ಮೀ., ಪೂರ್ಣಮಟ್ಟ 652.28 ಮೀಟರ್ ಹೊಂದಿದೆ. ಇದು 30 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ನೀರಾವರಿಗಾಗಿ 1907ರಲ್ಲಿ ಈ ಜಲಾಶಯ ನಿರ್ಮಾಣವಾಗಿದೆ.
ಘಟಪ್ರಭಾ:ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ನಲ್ಲಿರುವ ಘಟಪ್ರಭಾದ ಎತ್ತರ 48.3 ಮೀ., ಉದ್ದ 10,183 ಮೀ., ಪೂರ್ಣಮಟ್ಟ 2,175.00 ಅಡಿ ಇದೆ. ಇದು 51 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈ ಜಲಾಶಯ 1977ರಲ್ಲಿ ನಿರ್ಮಾಣವಾಯಿತು. ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಿದೆ.
ಮಲಪ್ರಭಾ:ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿರುವ ಈ ಜಲಾಶಯದ ಎತ್ತರ 154.53 ಮೀ., ಉದ್ದ 154.52 ಮೀ., ಪೂರ್ಣಮಟ್ಟ 2,079 ಅಡಿ. ನೀರಿನ ಸಂಗ್ರಹದ ಸಾಮರ್ಥ್ಯ 34.35 ಟಿಎಂಸಿ. 1972ರಲ್ಲಿ ನಿರ್ಮಾಣವಾದ ಈ ಜಲಾಶಯ ಬೆಳಗಾವಿ, ಗದಗ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ನೀರಾವರಿ, ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಿದೆ.
ಹಾರಂಗಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಹಾರಂಗಿ ಜಲಾಶಯದ ಉದ್ದ 845.82 ಮೀ., ಎತ್ತರ 49.99 ಮೀ., ಪೂರ್ಣಮಟ್ಟ 2,859 ಅಡಿ. ಇದು 8.5 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ.
ಸೂಪಾ:ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿರುವ ಸೂಪಾ ಜಲಾಶಯದ ಎತ್ತರ 101 ಮೀ., ಉದ್ದ 332 ಮೀ., ಪೂರ್ಣಮಟ್ಟ 564.00 ಮೀಟರ್. ಇದು 147 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಪ್ರಮುಖ ಜಲಾಶಯಗಳಲ್ಲಿನ ಇಂದಿನ ನೀರು ಶೇಖರಣೆ ಮತ್ತು ನೀರಿನ ಹರಿವು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕೆಆರ್ಎಸ್ ( ಕೃಷ್ಣರಾಜಸಾಗರ) ಜಲಾಶಯ:ಗರಿಷ್ಠ ನೀರಿನ ಮಟ್ಟ 96.35 ಅಡಿ. ಇಂದಿನ ನೀರಿನ ಸಂಗ್ರಹ ಮಟ್ಟ: 20.084 ಟಿಎಂಸಿ.
ಒಳಹರಿವು: 2636 ಕ್ಯೂಸೆಕ್ಸ್, ಹೊರಹರಿವು: 438 ಕ್ಯೂಸೆಕ್ಸ್.
ಕಬಿನಿ ಜಲಾಶಯ: ಗರಿಷ್ಠ ಮಟ್ಟ 2284 ಅಡಿ. ಇಂದಿನ ನೀರಿನ ಸಂಗ್ರಹ : 19.52 ಟಿಎಂಸಿ ಅಡಿಗಳಷ್ಟಿದೆ.
ಒಳ ಹರಿವು: 3.28 ಕ್ಯೂಸೆಕ್ಸ್, ಹೊರ ಹರಿವು: 3.10 ಕ್ಯೂಸೆಕ್ಸ್.