ಬೆಂಗಳೂರು: ಆಟವಾಡುತ್ತಿದ್ದ ಬಾಲಕನೋರ್ವ ಮನೆ ಮುಂದೆ ಇದ್ದ ನೀರಿನ ಸಂಪ್ ಒಳಗೆ ಬಿದ್ದು, ಸಾವನ್ನಪ್ಪಿರುವ ಘಟನೆ ನಗರದ ಸುಬ್ರಮಣ್ಯಪುರ ಠಾಣಾ ವ್ಯಾಪ್ಯಿಯ ವಿಠ್ಠಲ್ ನಗರದ ಐದನೇ ಕ್ರಾಸ್ನಲ್ಲಿ ನಡೆದಿದೆ.
ಮನೆಯ ಮುಂದಿನ ನೀರಿನ ಸಂಪ್ ಒಳಗೆ ಬಿದ್ದು ಬಾಲಕ ಸಾವು - subramanya nagar police
ಆಟವಾಡುತ್ತಿದ್ದ ವೇಳೆ ನೀರಿನ ಸಂಪ್ ಒಳಗೆ ಬಿದ್ದು ಏಳು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ಯಿಯ ವಿಠ್ಠಲ್ ನಗರದ ಐದನೇ ಕ್ರಾಸ್ನಲ್ಲಿ ನಡೆದಿದೆ.
ಏಳು ವರ್ಷದ ಭಾಸ್ಕರ್ ಮೃತಪಟ್ಟ ಬಾಲಕ. ಭಾಸ್ಕರ್, ಸಮೀಪದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆದರೆ ಇಂದು ಬೇರೆ ಯಾವುದೋ ಕಾರಣಕ್ಕಾಗಿ ಶಾಲೆಗೆ ಹೋಗಿರಲಿಲ್ಲ. ತಂದೆ ಸಿದ್ದಪ್ಪ ಹಾಗೂ ತಾಯಿ ಕೆಲಸ ನಿಮಿತ್ತ ಹೊರ ಹೋಗಿದ್ದರು. ಈ ವೇಳೆ ಅಕ್ಕಪಕ್ಕ ಮನೆಯ ಹುಡುಗರೊಂದಿಗೆ ಆಟವಾಡುತ್ತಿದ್ದ ಭಾಸ್ಕರ್, ಅರಿಯದೇ ನೀರಿನ ಸಂಪ್ ಒಳಗೆ ಬಿದ್ದಿದ್ದಾನೆ. ಕೆಲಸ ಮುಗಿಸಿಕೊಂಡು ಮನೆಗೆ ಬಂದ ದಂಪತಿ, ಮಗ ಕಾಣದಿರುವುದಕ್ಕೆ ಎಲ್ಲ ಕಡೆ ಹುಡುಕಾಡಿದರು. ಬಳಿಕ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಪೊಲೀಸರು ಮನೆ ಬಳಿ ಬಂದು ಪರಿಶೀಲನೆ ನಡೆಸಿದರು. ಮನೆ ಮುಂದಿದ್ದ ಸಂಪ್ ತೆರೆದು ನೋಡಿದಾಗ ಬಾಲಕ ಭಾಸ್ಕರ್ ಶವ ಪತ್ತೆಯಾಗಿದೆ. ಪ್ರೀತಿಯ ಮಗನನ್ನು ಶವವಾಗಿ ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.