ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂದು ಬಿಂಬಿಸಿಕೊಂಡು ಪರಿಚಯವಿರುವ ಸಚಿವರಿಂದ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಸಿಸ್ಟೆಂಟ್ ರಿಜಿಸ್ಟ್ರಾರ್ನಿಂದ 70 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಅಸಿಸ್ಟೆಂಟ್ ಮ್ಯಾನೇಜರ್ ಡಾ.ಪ್ರಭಾ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ಮಂಜುನಾಥ್, ಆತನ ಪತ್ನಿ ಲಕ್ಷ್ಮೀಪ್ರಿಯಾ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ಬಾಳದಲ್ಲಿರುವ ಪಶುಪಾಲನಾ ಇಲಾಖೆಯಲ್ಲಿ ಎಫ್ಡಿಎ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಪ್ರಭಾ ಅವರಿಗೆ ದೂರದ ಸಂಬಂಧಿ. ಪ್ರಭಾ ಅವರು ಕೋಲಾರದಲ್ಲಿರುವ ತಂದೆ ಮನೆಗೆ ಹೋಗಿದ್ದಾಗ ಮಂಜುನಾಥ್ ಭೇಟಿಯಾಗಿದ್ದಾನೆ. ಈ ವೇಳೆ, ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿದ್ದೇನೆ. ನನಗೆ ಎಲ್ಲಾ ಸಚಿವರ ಪರಿಚಯವಿದೆ. ನಿಮ್ಮ ಕೆಲಸಗಳೇನಾದರೂ ಇದ್ದರೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದ.
ಓದಿ:ವಿರೋಧದ ನಡುವೆಯೂ ಪ್ರೇಮ ವಿವಾಹ: ರೊಚ್ಚಿಗೆದ್ದ ಪೋಷಕರಿಂದ 250 ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು
2019ರಲ್ಲಿ ಪ್ರಭಾ ಅವರನ್ನು ಹೆಬ್ಬಾಳ ಖಾಸಗಿ ಹೋಟೆಲ್ಗೆ ಕರೆಯಿಸಿಕೊಂಡು ಸರ್ಕಾರಿ ನೌಕರ ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಒಂದು ಲಕ್ಷ ಹಣ ನೀಡುವಂತೆ ಮನವಿ ಮಾಡಿಕೊಂಡಿದ್ದ. ಅದರಂತೆ ಪ್ರಭಾ ಹಣ ನೀಡಿದ್ದರು. ಕೆಲ ದಿನಗಳ ಬಳಿಕ ಆರೋಪಿನ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಹಣ ಇಲ್ಲ ಹೇಳಿದಕ್ಕೆ ಬಜಾಜ್ ಫೈನಾನ್ಸ್ನಿಂದ ಲೋನ್ ಮಾಡಿಸಿಕೊಟ್ಟು ಹಣ ಪಡೆದಿದ್ದ. ಹೀಗೆ, ಹಂತ-ಹಂತವಾಗಿ 70.35 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ನೀಡಿರುವ ದೂರಿನ ಮೇರೆಗೆ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.