ಬೆಂಗಳೂರು: ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ವಿದೇಶಿಗರು ಸೇರಿ 6 ಮಂದಿ ಡ್ರಗ್ಸ್ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿ ಅವರಿಂದ ಹೆರಾಯಿನ್, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಣನಕುಂಟೆ ಠಾಣೆಯ ಇನ್ಸ್ಪೆಕ್ಟರ್ ನಂಜೇಗೌಡ ನೇತೃತ್ವದಲ್ಲಿ ದಾಳಿ ಮಾಡಿ ಮಣಿಪುರ ರಾಜ್ಯದ ಮೂವರನ್ನು ಬಂಧಿಸಿದ್ದಾರೆ. ಮುಯೀನ್ ಅಲಂ (22) ಮೊಹಮ್ಮದ್ ವಾಕಿಮ್ ಯೂನಸ್ (23) ಬಂಧಿತರು. ಅವರಿಂದ 111.16 ಗ್ರಾಂ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ನಲ್ಲಿ ಒಬ್ಬನ ಬಂಧನ
ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಟೀಚರ್ಸ್ ಕಾಲೋನಿ 7ನೇ ಮುಖ್ಯರಸ್ತೆಯ ಖಾಲಿ ಜಾಗದಲ್ಲಿ ವಿದೇಶಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ವಿದೇಶಿ ಪ್ರಜೆ ಡಾಲೊ ಭಾರತೆಲೆಮೈ ಎನ್ನುವವನ್ನು ಬಂಧಿಸಿದ್ದಾರೆ.
ಈತನಿಂದ 1.3 ಲಕ್ಷ ರೂ. ಮೌಲ್ಯದ 20 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಎಚ್.ಆರ್.ಬಿ.ಆರ್ ಲೇಔಟ್ 7ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತು ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡು ಇದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.