ಬೆಂಗಳೂರು:ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸಿಎಸ್‌ಆರ್ ಅನುದಾನದಡಿ ನಗರದಲ್ಲಿ 500 ಕಡೆ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲು 'ಎ ಟೆಕ್ ಟ್ರೋನ್' ಕಂಪನಿ ಜೊತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಡಂಬಡಿಕೆ ಮಾಡಿಕೊಂಡಿದೆ.
ಈ ಒಪ್ಪಂದಕ್ಕೆ ಮೇಯರ್ ಗಂಗಾಂಬಿಕೆ ಅವರು ಸಹಿ ಹಾಕಿದ್ದಾರೆ.ಸಂಸ್ಥೆಯೇ ನಗರದ ಪ್ರಮುಖ ಸ್ಥಳಗಳಲ್ಲಿ ವಾಯು ಶುದ್ಧೀಕರಣ ಘಟಕಗಳನ್ನು ಅವಳವಡಿಸಲಿದೆ. ವಾಯು ಶುದ್ಧೀಕರಣ ಯಂತ್ರ ಅಳವಡಿಕೆಗೆ ಪಾಲಿಕೆಯಿಂದ ಯಾವುದೇ ವೆಚ್ಚ ಭರಿಸುತ್ತಿಲ್ಲ.
ಕಲುಷಿತ ಗಾಳಿ ಹಾಗೂ ಧೂಳಿನ ಕಣಗಳ ಪ್ರಮಾಣವು ಮಿತಿ ಮೀರಿದ ಪರಿಣಾಮ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಈ ಯಂತ್ರಗಳು ಧೂಳಿನ ಕಣ, ಹೊಗೆಯನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಸೂಸಲಿದೆ ಎಂದು ಗಂಗಾಂಬಿಕೆ ಹೇಳಿದರು.
ನಗರದಲ್ಲಿ 80 ಲಕ್ಷಕ್ಕೂ ಅಧಿಕ ವಾಹನಗಳಿವೆ. ಪ್ರತಿ ವರ್ಷ ಶೇ.10ರಷ್ಟು ವಾಹನಗಳು ಹೆಚ್ಚುತ್ತಿವೆ. ಇದರಿಂದ ವಾಯುಮಾಲಿನ್ಯ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗಾಗಲೇಪ್ರಾಯೋಗಿಕವಾಗಿ ಹಡ್ಸನ್ ವೃತ್ತದ ಬಳಿ ವಾಯು ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
500 ಜಂಕ್ಷನ್‌ಗಳಲ್ಲಿ ಯಂತ್ರಗಳನ್ನು ಅಳವಡಿಸಲು ಕ್ರಮ ವಹಿಸಲಾಗುತ್ತಿದ್ದು, ಅದಕ್ಕೆ ಕೌನ್ಸಿಲ್ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಈ ಸಾಲಿನ ಬಜೆಟ್‌ನಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಅಳವಡಿಕೆಗೆ ₹ 5 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.
ಸಂಚಾರಿ ಪೋಲೀಸ್ ಇಲಾಖೆಯ ಅಭಿಪ್ರಾಯ ಪಡೆದು, ವಾಹನ ದಟ್ಟಣೆ ಇರುವ ಜಂಕ್ಷನ್‌ಗಳಲ್ಲಿ ಮೊದಲು ಯಂತ್ರಗಳನ್ನು ಅಳವಡಿಸಲಾಗುತ್ತದೆ. ಎ ಟೆಕ್ ಟ್ರೋನ್ ಕಂಪನಿಯೇ ಹಲವು ಕಾರ್ಪೋರೇಟ್ ಸಂಸ್ಥೆಗಳ ಮೂಲಕ ಯಂತ್ರಗಳನ್ನು ಅಳವಡಿಕೆ ಮಾಡಲಿದೆ. ಆದರೆ, ವಾಣಿಜ್ಯ ಜಾಹೀರಾತಿಗೆ ಅವಕಾಶ ಇರುವುದಿಲ್ಲ ಎಂದರು.
ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆಯಡಿ ಹೆಚ್ಚು ವಾಯುಮಾಲಿನ್ಯ ಉಂಟುಮಾಡುವ ವಾಹನಗಳು ರಸ್ತೆಗಳಲ್ಲಿ ಓಡಾಟ ಮಾಡುವಂತಿಲ್ಲ. ಅಂತಹ ವಾಹನಗಳಿಗೆ ಕಡಿವಾಣ ಹಾಕುವಂತೆ ಮಂಡಳಿಗೆ ಪತ್ರ ಬರೆಯಲಾಗುವುದುದು ಎಂದು ಮೇಯರ್ ತಿಳಿಸಿದರು.