ಬೆಂಗಳೂರು: ದೆಹಲಿ ಮೂಲದ ಆರೋಪಿಗಳಿಬ್ಬರು ಆಭರಣದಂಗಡಿಗೆ ಕನ್ನ ಹಾಕಲು ತಿಂಗಳ ಹಿಂದೆನೇ ಸ್ಕೆಚ್ ಹಾಕಿ ಕುಳಿತಿದ್ದರು. ಅದರಂತೆ ಮುನ್ನಡೆದ ಆರೋಪಿಗಳು ಶಾಪ್ನ ಗೋಡೆ ಕೊರೆದು 2.50 ಕೋಟಿ ಮೌಲ್ಯದ ಐದು ಕೆಜಿ ಚಿನ್ನವನ್ನು ದೋಚಿರುವ ಘಟನೆ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್‌ನಲ್ಲಿ ನಡೆದಿದೆ.
ಸ್ವಂತ ಕಟ್ಟಡದಲ್ಲೇ ಶಾಪ್: ಜೆ ಪಿ ನಗರ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ 2010ರಿಂದ ಜೆ ಪಿ ನಗರ 1ನೇ ಹಂತದ ಶಾಕಾಂಬರಿ ನಗರದಲ್ಲಿ ತಮ್ಮ ಸ್ವಂತ ಕಟ್ಟಡದ 2ನೇ ಮಹಡಿಯಲ್ಲಿ ಪ್ರಿಯದರ್ಶಿನಿ ಜ್ಯುವೆಲರ್ಸ್ ಶಾಪ್ ಆರಂಭಿಸಿದ್ದರು. ಪ್ರತಿನಿತ್ಯ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ಮಾಡಿಕೊಂಡಾದ ಬಳಿಕ ಚಿನ್ನಾಭರಣಗಳನ್ನು ಲಾಕರ್‌ಗಳಲ್ಲಿ ಇಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಹೋಗುತ್ತಿದ್ದರು.
ಚಿನ್ನ ದೋಚಲು ಸ್ಕೆಚ್: ದೆಹಲಿ ಮೂಲದ ಇಬ್ಬರು ಆರೋಪಿಗಳು ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಖಾಲಿ ಇರುವುದನ್ನು ಗಮನಿಸಿದ್ದರು. ಕಳೆದ 1 ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರ್ಸ್‌ಗೆ ಕನ್ನ ಹಾಕಲು ಸಂಚು ರೂಪಿಸಿದ್ದರು.
ಓದಿ:ಮಂಡ್ಯ ದರೋಡೆ ಪ್ರಕರಣ: ₹80 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ
ಗೋಡೆ ಕೊರೆಯಲು ಆರಂಭ: ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿ ಕೊರೆಯಲು ಆರಂಭಿಸಿದ್ದರು. ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು.