ಬೆಂಗಳೂರು: ಗುತ್ತಿಗೆದಾರರಿಂದ ಶೇ.40 ರ ಕಮಿಷನ್ ಪಡೆಯುತ್ತಿರುವ ಆರೋಪ ಕುರಿತು ಗುತ್ತಿಗೆದಾರರ ಸಂಘ ಮಾಡಿರುವ ಆರೋಪಗಳ ಕುರಿತು ಮಾಧ್ಯಮ ವರದಿಗಳ ಉಲ್ಲೇಖಿಸಿ ಕ್ರಮಕ್ಕೆ ಆಗ್ರಹಿಸಿದ ಕಾಂಗ್ರೆಸ್ ನಡೆಗೆ ಮಾಧುಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು ವಾಗ್ವಾದಕ್ಕೆ ಕಾರಣವಾದ ಘಟನೆ ಪರಿಷತ್ ಕಾಲಪದಲ್ಲಿ ನಡೆದಿದೆ.
ಶೇ.40 ಕಮಿಷನ್ ವಿಚಾರ; ಪರಿಷತ್‌ನಲ್ಲಿ ಕಾಂಗ್ರೆಸ್ ಶೂನ್ಯವೇಳೆಯಲ್ಲಿ ಪ್ರಸ್ತಾಪಕ್ಕೆ ಬಿಜೆಪಿ ವಿರೋಧ, ವಾಗ್ವಾದ ಶೂನ್ಯವೇಳೆಯಲ್ಲಿ ಈ ರೀತಿಯ ಪ್ರಸ್ತಾಪ ತರುವುದು ಸರಿಯಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಇದರಿಂದಾಗಿ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವಿಧಾನ ಪರಿಷತ್ ಶೂನ್ಯವೇಳೆ ಕಲಾಪದಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡೆಯುವುದು ಇನ್ನೂ ನಿಂತಿಲ್ಲ ಎನ್ನುವ ಕುರಿತು ಗುತ್ತಿಗೆದರರ ಸಂಘ ಮಾಡಿರುವ ಆರೋಪದ ಕುರಿತು ಮಾಧ್ಯಮಗಳ ವರದಿ ಉಲ್ಲೇಖಿಸಿ ಈ ಬಗ್ಗೆ ತನಿಖೆ ಆಗಬೇಕು ಎಂದು ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಒತ್ತಾಯಿಸಿದರು.
ಸರ್ಕಾರದ ಪರ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ, ನಿನ್ನೆ ಸದನ ಮುಗಿದು ಇವತ್ತು ಸದನ ಶುರುವಾಗುವ ಮೊದಲು ಆದ ಘಟನೆಗಳ ಬಗ್ಗೆ ಮಾತ್ರ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಬೇಕು. ಆದರೆ, ಮಾಧ್ಯಮಗಳ ವರದಿ ಆಧರಿಸಿ ಆರೋಪ ಮಾಡುತ್ತಿದ್ದಾರೆ.
ಯಾವ ಸಚಿವರು, ಶಾಸಕರು ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂದು ನಿಖರವಾಗಿ ಹೇಳಬೇಕು, ಪತ್ರಿಕೆಗಳಲ್ಲಿ ಬಂದಿದ್ದನ್ನೆಲ್ಲ ಇಲ್ಲಿ ತಂದು ಹೇಳುವಂತಿಲ್ಲ. ಇಂತಹ ವಿಷಯ ಶೂನ್ಯವೇಳೆಯಲ್ಲಿ ತರಬಾರದು. ರಾಥೋಡ್ ನನ್ನ ಬಳಿ 50 ಸಾವಿರ ಕೇಳಿದರು ಅಂತಾ ಪತ್ರಿಕೆಗೆ ನಾನು ಹೇಳಿದರೆ ಅದನ್ನೂ ಇಲ್ಲಿ ಚರ್ಚೆಗೆ ಅವಕಾಶ ನೀಡಲಾಗುತ್ತದೆಯಾ? ಎಂದು ಕಾಂಗ್ರೆಸ್ ಪ್ರಸ್ತಾವನೆಯನ್ನೇ ತಳ್ಳಿಹಾಕಿದರು.
ಈ ವೇಳೆ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ಕಮಿಷನ್ ಪಡೆಯುವುದು ನಡೆದಿಲ್ಲ ಎಂದರೆ ಇಲ್ಲ ಎನ್ನಿ, ಚರ್ಚೆಗೆ ತರುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪ್ರಸ್ತಾಪವನ್ನು ಸಮರ್ಥಿಸಿಕೊಂಡರು. ಈ ವೇಳೆ ರಾಥೋಡ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ ಮಾತನಾಡಲು ಅವಕಾಶ ನೀಡಿ ಎಂದು ಬೇಡಿಕೆ ಇಟ್ಟರು.
ಚರ್ಚೆಗೆ ಶೂನ್ಯವೇಳೆಯಲ್ಲಿ ಅವಕಾಶವಿಲ್ಲ ಎಂದು ಸಭಾಪತಿ ಅವಕಾಶ ನಿರಾಕರಿಸಿದರು. ಈ ವೇಳೆ ಗದ್ದಲದ ವಾತಾವರಣ ಸೃಷ್ಟಿಯಾಯಿತು, ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶ ಮಾಡಿ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ತಿಳಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.
ಇದನ್ನೂ ಓದಿ:26,953 ಕೋಟಿ ರೂ.ಬೃಹತ್ ಪ್ರಮಾಣದ ಪೂರಕ ಅಂದಾಜಿಗೆ ವಿಧಾನಸಭೆ ಅಂಗೀಕಾರ