ಬೆಂಗಳೂರು: ನಗರದಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಹಂತದಲ್ಲಿ ಕಂಡುಬಂದಿದೆ. ಮೂರು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡಿದ್ದ ಪೊಲೀಸ್ ವಸತಿ ಸಮುಚ್ಚಯದಲ್ಲಿ ಬಿರುಕುಂಟಾಗಿದ್ದು ಸುಮಾರು ಎರಡು ಅಡಿಯಷ್ಟು ಎಡಕ್ಕೆ ವಾಲಿದೆ.
ಪೊಲೀಸ್ ಇಲಾಖೆ ಕಟ್ಟಡದಲ್ಲಿದ್ದ 32 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕುಟುಂಬವನ್ನು ಅನ್ನಪೂರ್ಣೇಶ್ವರಿ ನಗರದಲ್ಲಿರುವ ಪೊಲೀಸ್ ಕ್ವಾರ್ಟರ್ಸ್‌ಗೆ ಸ್ಥಳಾಂತರಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2016ರಲ್ಲಿ ಬಿನ್ನಿಮಿಲ್ ಸಮೀಪದಲ್ಲಿ ನೂತನ ಮಾದರಿಯಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದಿದ್ದು, 2018ರಲ್ಲಿ ಪೂರ್ಣಗೊಂಡಿತ್ತು. ನಂತರ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸ್ ಸೇರಿ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 64 ಮಂದಿ ಅಧಿಕಾರಿಗಳು, ಸಿಬ್ಬಂದಿಯ ಕುಟುಂಬ ವಾಸವಾಗಿತ್ತು. ಇದೀಗ 32 ಕುಟುಂಬ ವಾಸವಾಗಿರುವ ಕಟ್ಟಡದಲ್ಲಿ ಬಿರುಕು ಬಿಟ್ಟಿದ್ದು, ಎಡಕ್ಕೆ ಎರಡು ಅಡಿಯಷ್ಟು ವಾಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಂತ ಹಂತವಾಗಿ ವಾಲಿದ ಕಟ್ಟಡ:
ಎರಡು ವರ್ಷಗಳಿಂದ ಕಟ್ಟಡದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಹಂತ ಹಂತವಾಗಿ ವಾಲಿದೆ. ಶುಕ್ರವಾರ ಮಧ್ಯಾಹ್ನ ಬಿರುಕಿನ ಶಬ್ದ ಕೇಳಿ ಬಂದಿದ್ದು, ಆತಂಕಗೊಂಡ ಕಟ್ಟಡ ನಿವಾಸಿಗಳು ಹೊರಗಡೆ ಬಂದು ನೋಡಿದಾಗ ಕಟ್ಟಡದ ಕೆಲವೆಡೆ ಬಿರುಕು ಬಿಟ್ಟಿದ್ದು ಮತ್ತು ವಾಲಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.