ಕರ್ನಾಟಕ

karnataka

ETV Bharat / city

ಬಂಧಿಗಳ ಗುರುತಿಸುವಿಕೆ (ತಿದ್ದುಪಡಿ) ಸೇರಿ ಮೂರು ಮಸೂದೆಗಳಿಗೆ ವಿಧಾನಸಭೆ ಒಪ್ಪಿಗೆ - Bangalore

ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕದಲ್ಲಿ ಆರೋಪಿಗಳ ಅಳತೆ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್‌ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸಂಗ್ರಹಿಸಲಾಗುತ್ತದೆ- ಗೃಹ ಸಚಿವ ಆರಗ ಜ್ಞಾನೇಂದ್ರ

assembly session
ವಿಧಾನಸಭೆ ಕಲಾಪ

By

Published : Sep 17, 2021, 9:15 PM IST

ಬೆಂಗಳೂರು: ಅಪರಾಧಿಗಳ ಅಳತೆಯ ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್‌ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನ್​​ ಮಾದರಿಯನ್ನು ಪಡೆಯುವ ಸಂಬಂಧ 2021ನೇ ಸಾಲಿನ ಕೈದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ಸುದೀರ್ಘ ಚರ್ಚೆಯ ನಂತರ ವಿಧಾನಸಭೆ ಅಂಗೀಕರಿಸಿತು.

ಚರ್ಚೆಯ ಬಳಿಕ ಮಸೂದೆಗಳಿಗೆ ಒಪ್ಪಿಗೆ

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು 2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021ನೇ ಸಾಲಿನ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಹಾಗೂ 2021 ನೇ ಸಾಲಿನ ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಅಂಗೀಕರಿಸುವಂತೆ ಸದನವನ್ನು ಕೋರಿದರು. ಆಡಳಿತ ಪಕ್ಷದ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಸದಸ್ಯರು ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ನಂತರ ಮೂರು ವಿಧೇಯಕಗಳನ್ನು ಅಂಗೀಕರಿಸಲಾಯಿತು.

ಕೈದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕದಲ್ಲೇನಿದೆ?

ವಿಧೇಯಕಗಳ ಕುರಿತ ಮಾತನಾಡಿದ ಗೃಹ ಸಚಿವರು, ಕೈದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕದಲ್ಲಿ ಆರೋಪಿಗಳ ಅಳತೆ, ಪಾದದ ಗುರುತು ಸಂಗ್ರಹಿಸುವ ಬದಲು ರಕ್ತದ ಮಾದರಿ, ಡಿಎನ್‌ಎ ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿನ ಮಾದರಿಯನ್ನು ಸಂಗ್ರಹಿಸಲಾಗುತ್ತದೆ.

ಈ ಹಿಂದೆ ಒಂದು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಶಿಕ್ಷೆಗೊಳಗಾಗುವ ಅಪರಾಧಿಗಳಿಂದ ಸಂಗ್ರಹಿಸಲಾಗುತ್ತಿತ್ತು. ಇದೀಗ ಒಂದು ತಿಂಗಳು ಮತ್ತು ಅದಕ್ಕಿಂತ ಹೆಚ್ಚು ಶಿಕ್ಷೆಗೊಳಗಾಗುವ ಅಪರಾಧಿಗಳ ಗುರುತನ್ನು ಸಂಗ್ರಹಿಸಲಾಗುತ್ತದೆ. ಅಲ್ಲದೇ, ಈ ಕಾರ್ಯಕ್ಕೆ ಮ್ಯಾಜಿಸ್ಟ್ರೇಟ್ ಬದಲು ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್​​ಪಿ) ಮತ್ತು ಡಿಸಿಪಿಗಳನ್ನು ಬಳಕೆ ಮಾಡಲು ವಿಧೇಯಕದಲ್ಲಿ ಉಲ್ಲೇಖ ಮಾಡಲಾಗಿದೆ ಎಂದರು.

ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ ಕುರಿತು..

ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕದ ಅನ್ವಯ ಆರೋಪಿಗಳನ್ನು ವಿಡಿಯೋ ಸಂವಾದ ಮೂಲಕ ಹಾಜರುಪಡಿಸಲು ಅನುಕೂಲವಾಗಲಿದೆ. ಕೋವಿಡ್‌ನಿಂದಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗುತ್ತಿದೆ.

ಮ್ಯಾಜಿಸ್ಟ್ರೇಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ. ಈ ತಿದ್ದುಪಡಿ ಮೂಲಕ ಸೆಷನ್‌ ಕೋರ್ಟ್‌ನಲ್ಲಿಯೂ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದಾಗಿದೆ. ಈ ವೇಳೆ ಎರಡು ಕಡೆಯ ವಕೀಲರು ಉಪಸ್ಥಿತರಿರುವವರು ಎಂದು ತಿಳಿಸಿದರು.

ಕರ್ನಾಟಕ ಬಂಧಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ

ಜೈಲುಗಳ ಅಭಿವೃದ್ಧಿ, ಅಧಿಕಾರಿಗಳಿಗೆ ಸೌಲಭ್ಯಗಳು, ಕೈದಿಗಳ ಸುಧಾರಣೆ, ಕೌಶಲ್ಯಾಭಿವೃದ್ಧಿಗಾಗಿ 2021ನೇ ಸಾಲಿನ ಕರ್ನಾಟಕ ಬಂಧಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ತರಲಾಗುತ್ತಿದೆ. ಆಧುನೀಕರಣಕ್ಕಾಗಿ ಯೋಜನೆಯನ್ನು ರೂಪಿಸುವುದು ಮತ್ತು ಬಂಧಿಗಳು ಬಿಡುಗಡೆ ಹೊಂದಿದ ನಂತರ ಅವರ ಅಗತ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉದ್ಯೋಗ ಆಧಾರಿತ ತಾಂತ್ರಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಮಂಡಳಿಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಮಂಡಳಿಯ ಕೇಂದ್ರ ಸ್ಥಾನವಿರುತ್ತದೆ. ಗೃಹ ಸಚಿವರು ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಪಾಧ್ಯಕ್ಷರಾಗಿರುತ್ತಾರೆ.

ಇನ್ನುಳಿದಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರು, ಆಯೋಗ್ಯ ಇಲಾಖೆಯ ಆಯುಕ್ತರು, ಕೌಶಲ್ಯಾಭಿವೃದ್ಧಿ ಇಲಾಖೆ ನಿರ್ದೇಶಕರು, ಕೃಷಿ ಇಲಾಖೆ ನಿರ್ದೇಶಕರು, ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗು ಪಶುಸಂಗೋಪನೆ ಇಲಾಖೆ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾ ನಿರ್ದೇಶಕರು ಸದಸ್ಯರ ಕಾರ್ಯದರ್ಶಿಯಾಗಿರುತ್ತಾರೆ ಎಂದು ವಿವರಣೆ ನೀಡಿದರು.

ABOUT THE AUTHOR

...view details