ಬೆಂಗಳೂರು: ಎಕ್ಸಾಂ! ಇದೊಂದು ಪದ ಕೇಳಿದರೆ ಸಾಕು ಅನೇಕರಿಗೆ ಬೇಡವೆಂದರೂ ಟೆನ್ಶನ್, ಭಯ ಶುರುವಾಗಿ ಬಿಡುತ್ತೆ. ಇದೀಗ ರಾಜ್ಯಾದ್ಯಂತ ಸಾಲುಸಾಲು ಪರೀಕ್ಷೆಗಳು ಶುರುವಾಗುತ್ತಿದ್ದು ಪ್ರಮುಖವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ರಿಂದ ಆರಂಭವಾಗಲಿದೆ.
ಪರೀಕ್ಷೆ ಅಂದಮೇಲೆ ಸರಿಯಾದ ತಯಾರಿ ಅಗತ್ಯವಿದೆ. ಇದರ ಜೊತೆಗೆ, ಆರೋಗ್ಯದ ಕಾಳಜಿಯೂ ಮುಖ್ಯ. ಹೀಗಾಗಿ ಮಕ್ಕಳ ತಜ್ಞರು ವಿದ್ಯಾರ್ಥಿಗಳ ಪರೀಕ್ಷೆಯ ಸಂಬಂಧ ಒಂದಷ್ಟು ಕಿವಿಮಾತುಗಳನ್ನು ಹೇಳಿದ್ದಾರೆ. ಪರೀಕ್ಷೆಗೆ ತಯಾರಿ ಹೇಗಿರಬೇಕು? ಯಾವ ರೀತಿ ಉತ್ತರ ಬರೆಯಬೇಕು? ಪರೀಕ್ಷಾ ಕೊಠಡಿಯೊಳಗೆ ಬಂದ ಕೂಡಲೆ ಮಾಡಬೇಕಾದ್ದೇನು? ಪರೀಕ್ಷಾ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಉಪಯುಕ್ತ ಸಲಹೆಗಳು ಹೀಗಿವೆ.
1. ಭಯ ಬೇಡ ಸೂಕ್ತ ತಯಾರಿ ಬೇಕು: ಪರೀಕ್ಷಾ ಕೇಂದ್ರಕ್ಕೆ ಹೋಗುವ ಹಿಂದಿನ ದಿನವೇ ಪರೀಕ್ಷೆಗೆ ಬೇಕಿರುವ ಹಾಲ್ ಟಿಕೆಟ್, ಕಾಲೇಜು ಐಡಿ ಕಾರ್ಡ್, ಪೆನ್ಗಳೂ ಸೇರಿದಂತೆ ಎಲ್ಲ ಸಾಮಗ್ರಿಗಳು ನಿಮ್ಮಲ್ಲಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಪರೀಕ್ಷೆಯ ಮುನ್ನಾದಿನ ಚೆನ್ನಾಗಿ ನಿದ್ದೆ ಮಾಡುವುದು ಹಾಗೂ ಪರೀಕ್ಷಾ ಕೇಂದ್ರಕ್ಕೆ ಅರ್ಧ ಗಂಟೆ ಮುಂಚಿತವಾಗಿ ತಲುಪುವುದು ಒಳ್ಳೆಯದು.
2. ಮತ್ತೊಮ್ಮೆ ಚೆಕ್ ಮಾಡಿ: ಪರೀಕ್ಷೆ ಸಮಯದಲ್ಲಿ ಉತ್ತರಗಳನ್ನು ಬರೆದ ನಂತರ ಅದನ್ನು ಮತ್ತೊಮ್ಮೆ ನೋಡುವುದೊಳಿತು. ಹಾಲ್ ಟಿಕೆಟ್ ನಂಬರ್ ಸರಿಯಾಗಿ ನಮೂದಿಸಲಾಗಿದೆಯೇ, ಗುರುತುಗಳು ಸರಿಯಾಗಿ ಮಾಡಲಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.