ಬೆಂಗಳೂರು:ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ನವೆಂಬರ್ 29 ರಿಂದ ನಡೆಸಲು ಉದ್ದೇಶಿಸಲಾಗಿದ್ದ ದ್ವಿತೀಯ ಪಿಯುಸಿ ಅರ್ಧವಾರ್ಷಿಕ ಪರೀಕ್ಷೆಯನ್ನು ಮುಂದೂಡಲು (2nd Pu Exam likely postponed)ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವಾರು ಕಾಲೇಜುಗಳಲ್ಲಿ ತರಗತಿಗಳೇ ಆರಂಭವಾಗಿಲ್ಲ. ಇನ್ನೂ ಕೆಲವೆಡೆ ಶೇ.15ರಿಂದ 20ರಷ್ಟು ಮಾತ್ರ ಬೋಧಿಸಲಾಗಿದೆ. ಅಷ್ಟರಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ಮಂದಾಗಿತ್ತು. ಇದಕ್ಕೆ ರಾಜ್ಯಾದ್ಯಂತ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಶಿಕ್ಷಣ ಇಲಾಖೆಯೇ ಪ್ರಶ್ನೆ ಪತ್ರಿಕೆ ನೀಡಲಿದ್ದು, ಆಯಾ ಕಾಲೇಜಿನ ಶಿಕ್ಷಕರಿಂದಲೇ ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು. ತರಗತಿಗಳು ಪೂರ್ಣಗೊಳ್ಳದೇ ಏಕಾಏಕಿ ಪರೀಕ್ಷೆ ನಡೆಸಿದರೆ, ವಿದ್ಯಾರ್ಥಿಗಳ ಮೇಲೆ ಒತ್ತಡ ಬೀಳಲಿದೆ. ದಿನಾಂಕವನ್ನು ಪರಿಷ್ಕರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
ತರಾತುರಿಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಪಿಯು ಮಂಡಳಿಯನ್ನು ಪ್ರಶ್ನಿಸಿದರೆ, ಲಕ್ಷಗಟ್ಟಲೇ ಸಂಬಳ ಪಡೆಯೋ ಕೆಲ ಸರ್ಕಾರಿ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡ್ತಿಲ್ಲ. ಜೊತೆಗೆ ಕೆಲ ವಿದ್ಯಾರ್ಥಿಗಳೂ ಕೊರೋನಾದಿಂದಾಗಿ ಪರೀಕ್ಷೆಯನ್ನು ಲಘುವಾಗಿ ಪರಿಗಣಿಸಿದ್ದಾರೆ. ಇದರಿಂದ ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಲು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು ಎಂಬುದು ಅವರ ಉತ್ತರ.
ಪ್ರಾಂಶುಪಾಲರು, ಶಿಕ್ಷಕರು ಹಾಗು ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿ, ಪರೀಕ್ಷೆಯನ್ನು 10ರಿಂದ 15 ದಿನಗಳ ಕಾಲ ಮುಂದೂಡುವ ಚಿಂತನೆಯಲ್ಲಿದ್ದೇವೆ ಎಂದು ಮಂಡಳಿ ತಿಳಿಸಿದೆ.