ಬೆಂಗಳೂರು:ರಾಜ್ಯದ ಎಲ್ಲ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್ಗಳ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿದೆ. ಇದರಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವ ಸಿ.ಎನ್. ಅಶ್ವತ್ಥ ನಾರಾಯಣ್ ನೇರ ಹಸ್ತಕ್ಷೇಪ ಇದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡರು ಆರೋಪ ಮಾಡಿದ್ದಾರೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಆಪ್ನ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ರಾಜ್ಯ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಇಲಾಖೆಯ ಪ.ಜಾ. ವಿಶೇಷ ಘಟಕ ಯೋಜನೆ ಮತ್ತು ಪ.ಪಂ. ಉಪ ಯೋಜನೆಯ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಟೂಲ್ ಕಿಟ್ ಟೆಂಡರ್ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನೀಡಿರುವ ನಕಲಿ ದಾಖಲೆ ನೀಡಿ ತಾಂತ್ರಿಕ ಅನುಮೋದನೆಯನ್ನು ಪಡೆದುಕೊಂಡಿದೆ.
ಸಚಿವರ ಒತ್ತಡ ಹಾಗೂ ನೇರ ಹಸ್ತಕ್ಷೇಪದಿಂದಾಗಿ ಬೋಗಸ್ ಕಂಪನಿಯೊಂದು 22 ಕೋಟಿ ಮೊತ್ತದ ಸಾಮಗ್ರಿಗಳನ್ನು ಪೂರೈಸಲು ಅನುಮತಿ ನೀಡಿರುವುದು ರಾಜ್ಯ ಬಿಜೆಪಿ ಸರ್ಕಾರದ ಶೇ 40 ರಷ್ಟು ಕಮಿಷನ್ ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮೋಹನ್ ದಾಸರಿ ಆರೋಪಿಸಿದರು.